ಕಾಂಗ್ರೆಸ್ ಹಿರಿಯ ನಾಯಕಿ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ರಾಹುಲ್ ಗಾಂಧಿ
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಇನ್ನೂ ಪ್ರಬುದ್ಧರಾಗಿಲ್ಲ, ಪ್ರಬುದ್ಧರಾಗಲು ಅವರಿಗೆ ಕಾಲಾವಕಾಶವನ್ನು ದಯವಿಟ್ಟು ನೀಡಿ ಎಂದು ಕಾಂಗ್ರೆಸ್ ಹಿರಿಯ ನಾಯಕಿ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಶುಕ್ರವಾರ ಹೇಳಿದ್ದಾರೆ.
ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪೀಳಿಗೆಯ ಬದಲಾವಣೆಗೆ ಕಾಂಗ್ರೆಸ್ ಪಕ್ಷ ಸಾಕ್ಷಿಯಾಗುತ್ತಿದೆ. ಭಾರತೀಯ ರಾಜಕೀಯ ಸಂಸ್ಕೃತಿಗೆ ತಕ್ಕಂತೆ ಪಕ್ಷ ಹೊಂದಿಕೊಳ್ಳಲು ಯತ್ನಿಸುತ್ತಿದೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ರಾಜಕೀಯ ಭಾಷೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಬಗ್ಗೆ ಪ್ರಧಾನಮಂತ್ರಿಗಳು ಹೀಗೆ ಮಾತನಾಡಬೇಕೆಂದು ನಿರೀಕ್ಷಿಸಬಾರದು. ಇದನ್ನು ಗಮನದಲ್ಲಿಟ್ಟುಕೊಳ್ಳುವುದೇ ಆದರೆ, ಭಾಷೆ, ಸಂಬಂಧ ಹಾಗೂ ಸಂಪರ್ಕದಲ್ಲಿ ಕಾಂಗ್ರೆಸ್ ತನಗೆ ತಾನೇ ಹೊಂದಿಕೊಳ್ಳಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರು ಪ್ರಬುದ್ಧರಾಗಿಲ್ಲ. ಅವರ ವಯಸ್ಸು ಅವರು ಪ್ರಬುದ್ಧರಾಗಲು ಬಿಡುತ್ತಿಲ್ಲ. ಪ್ರಬುದ್ಧರಾಗಲು ಅವರಿಗೆ ದಯವಿಟ್ಟು ಕಾಲಾವಕಾಶವನ್ನು ನೀಡಿ. ರೈತರ ಸಂಕಷ್ಟಗಳ ಬಗ್ಗೆ ರಾಹುಲ್ ಮಾತ್ರ ಮಾತನಾಡಿದ್ದಾರೆ. ಇದೀಗ ಅವರು ಬಹಳ ದೂರ ಸಾಗಿ ಬಂದಿದ್ದಾರೆ. ಪ್ರಧಾನಿಯಾಗುವ ಅವಕಾಶ ಅವರಿಗೆ ಮುಂದೆ ಬರಲಿದೆ. ಅವರು ಈಗ ರಾಜಕೀಯದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ ಮನಸ್ಸಿಗೆ ತೋಚಿದ್ದನ್ನು ಹೇಳುತ್ತಾರೆ. ಇದು ಒಳ್ಳೆಯ ಲಕ್ಷಣಗಳು ಎಂಬುದು ನನ್ನ ಅಭಿಪ್ರಾಯ. ರಾಹುಲ್ ಸಹಜವಾಗಿ ಮಾತನಾಡುವುದು ಕೆಲವರಿಗೆ ಇಷ್ಟವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಈ ಬೆಳವಣಿಗೆ ಇದೇ ವರ್ಷ ಆಗಬೇಕೆಂದು ನನ್ನ ಅಭಿಪ್ರಾಯ. ಹಲವಾರು ದಶಕಗಳಿಂದ ಒಬ್ಬರೇ ಹೊಂದಿರುವ ಹುದ್ದೆಗಳ ನಾಯಕತ್ವದಲ್ಲಿ ಬದಲಾವಣೆ ತರುವ ಅಗತ್ಯವಿದೆ. ಪ್ರಸ್ತುತ ನಡೆಯುತ್ತಿರುವ ಪಂಚರಾಜ್ಯಗಳ ಚುನಾವಣೆ ಬಳಿ ಇದರ ಬಗ್ಗೆ ನಿರ್ಧಾರವಾಗಬಹುದು. ರಾಹುಲ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬಂದಿದ್ದೇ ಆದರೆ, ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ ಎಂದಿದ್ದಾರೆ.
ನಂತರ ಪ್ರಿಯಾಂಕಾ ಗಾಂಧಿಯವರ ಬಗ್ಗೆ ಮಾತನಾಡಿರುವ ಅವರು, ಪ್ರಿಯಾಂಕಾ ಬಹಳ ಸೂಕ್ಷ್ಮತೆ ಹಾಗೂ ಬುದ್ಧಿವಂತ ಮಹಿಳೆಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳ ನಡುವಿನ ಮೈತ್ರಿ ಸಾಧಿಸುವಲ್ಲಿ ಆಕೆ ಪ್ರಮುಖ ಪಾತ್ರವನ್ನು ಸದ್ದಿಲ್ಲದೇ ವಹಿಸಿದ್ದಾರೆ. ಪ್ರಿಯಾಂಕಾ ಉತ್ತಮ ಕೇಳುಗಳಾಗಿದ್ದಾರೆ. ಕಾಂಗ್ರೆಸ್ ಉತ್ತಮವಾದ ರೂಪ ಪಡೆಯಲು ಆಕೆ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics