ಲಖನೌ: ಉತ್ತರ ಪ್ರದೇಶದಲ್ಲಿ ಫೆ.27 ರಂದು 5 ನೇ ಹಂತದ ಚುನಾವಣೆ ನಡೆಯುತ್ತಿದ್ದು, 51 ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ಪ್ರಾರಂಭವಾಗಿದೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದು, ಮೈತ್ರಿಯ ಹೊರತಾಗಿಯೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಡುವೆ ಹೈ-ಪ್ರೊಫೈಲ್ ಸ್ಪರ್ಧೆ ಏರ್ಪಟ್ಟಿದೆ.
ಅಮೇಥಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನ ಅಭ್ಯರ್ಥಿಯಾಗಿ ಅಮಿತಾ ಸಿಂಗ್ ಸ್ಪರ್ಧಿಸಿದ್ದು, ಬೆಳಿಗ್ಗೆ 7 ಕ್ಕೆ ಮತದಾನ ಪ್ರಾರಂಭವಾದ ಬೆನ್ನಲ್ಲೇ ಅಮಿತಾ ಸಿಂಗ್ ಮತ ಚಲಾವಣೆ ಮಾಡಿದ್ದಾರೆ. ಅಮಿತಾ ಸಿಂಗ್ ವಿರುದ್ಧ ಸಮಾಜವಾದಿ ಪಕ್ಷದಿಂದ ಗಾಯತ್ರಿ ಪ್ರಜಾಪತಿ ಸ್ಪರ್ಧಿಸಿದ್ದು, ಅವರೂ ಸಹ ಮತದಾನ ಮಾಡಿದ್ದಾರೆ.
ಫೈಜಾಬಾದ್, ಬಹರೈಚ್, ಬಸ್ತಿ, ಗೊಂದಾ, ಸಿದ್ಧಾರ್ಥನಗರ್, ಸಂತ್ ಕಬೀರ್ ನಗರ್, ಸುಲ್ತಾನ್ ಪುರ, ಶ್ರವಸ್ತಿ ಕ್ಷೇತ್ರಗಳಲ್ಲಿ ಜನರು ಮತದಾನ ಮಾಡಲು ಸಾಲುಗಟ್ಟಿ ನಿಂತಿದ್ದಾರೆ. ಒಟ್ಟು 1.84 ಕೋಟಿ ಮತದಾರರು 11 ಜಿಲ್ಲೆಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಫೆ.27 ರಂದು ನಿರ್ಧರಿಸಲಿದ್ದಾರೆ.