ಜರ್ನೈಲ್ ಸಿಂಗ್ - ಅರವಿಂದ್ ಕೇಜ್ರಿವಾಲ್
ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ವಿರುದ್ಧ ಸ್ಪರ್ಧಿಸುವುದಕ್ಕಾಗಿ ತಾವು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ದೆಹಲಿ ಆಪ್ ಶಾಸಕ ಜರ್ನೈಲ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.
'ನಾನು ನಿನ್ನೆಯೇ ರಾಜಿನಾಮೆ ಪತ್ರವನ್ನು ದೆಹಲಿ ವಿಧಾಸಭೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಅವರಿಗೆ ಕಳುಹಿಸಿದ್ದೇನೆ' ಎಂದು ಮಾಜಿ ಪತ್ರಕರ್ತ ಜರ್ನೈಲ್ ಸಿಂಗ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಐದು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿರುವ ಪ್ರಕಾಶ್ ಸಿಂಗ್ ಬಾದಲ್ ಅವರು ಪ್ರತಿನಿಧಿಸುತ್ತಿರುವ ಲಂಬಿ ವಿಧಾನಸಭಾ ಕ್ಷೇತ್ರದಿಂದ ಜರ್ನೈಲ್ ಸಿಂಗ್ ಅವರನ್ನು ಕಣಕ್ಕಿಳಿಸುತ್ತಿದೆ. ಫೆಬ್ರವರಿ 4ರಂದು ಪಂಜಾಬ್ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
2015ರಲ್ಲಿ ದೆಹಲಿಯ ರಾಜೋರಿ ಗಾರ್ಡನ್ ವಿಧಾನಸಭಾ ಕ್ಷೇತ್ರದಿಂದ ವಿಧಾಸಭೆಗೆ ಆಯ್ಕೆಯಾಗಿದ್ದ ಜರ್ನೈಲ್ ಸಿಂಗ್ ಅವರು ಹಲವು ತಿಂಗಳಿಂದ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.