ಮದುವೆಯಾದ ಮೇಘನಾ ಮತ್ತು ಬಸುದೇವ
ಭುವನೇಶ್ವರ: ಸಮಾಜ ಅವರನ್ನು ಕೀಳಾಗಿ ಕಾಣುತ್ತದೆ ಮತ್ತು ಕೆಳ ಮಟ್ಟದ ಜನರೆಂದು ಪರಿಗಣಿಸುತ್ತದೆ. ಜನರಿಂದ ತಾತ್ಸಾರವನ್ನು ಅನುಭವಿಸಬೇಕಾಗುತ್ತದೆ. ಆದರೆ ಈ ಎಲ್ಲಾ ಅಡ್ಡಿ, ಆತಂಕಗಳನ್ನು ಬದಿಗೊತ್ತಿ ತೃತೀಯ ಲಿಂಗಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾರೆ ಮತ್ತು ತುತ್ತು ಅನ್ನಕ್ಕಾಗಿ ಪರದಾಡುತ್ತಾರೆ, ಸಂತೋಷವನ್ನು ಹುಡುಕಿಕೊಂಡು ಹೋಗುತ್ತಾರೆ.
ಸಮಾಜದ ತಿರಸ್ಕಾರ ಮನೋಭಾವದ ನಡುವೆ ಒಡಿಶಾದ ಭುವನೇಶ್ವರದಲ್ಲಿ ಮೇಘನ ಎಂಬ ತೃತೀಯ ಲಿಂಗಿ ಬಸುದೇವ ಎಂಬುವವರನ್ನು ಮದುವೆಯಾಗಿದ್ದಾರೆ.''ನಾನಿಂದು ಬಹಳ ಸಂತೋಷವಾಗಿದ್ದೇನೆ. ತೃತೀಯ ಲಿಂಗಿಯೊಬ್ಬರನ್ನು ಮದುವೆಯಾಗುವ ದೃಢ ನಿರ್ಧಾರವನ್ನು ಬಸುದೇವ ಕೈಗೊಂಡಿದ್ದಾರೆ. ತೃತೀಯ ಲಿಂಗಿಗಳು ಮದುವೆಯಾಗಲು, ತಾಯಿಯಾಗಲು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ. ಆದರೆ ಅದು ತಪ್ಪು ಎಂದು ನಾನು ಸಾಬೀತುಪಡಿಸುತ್ತೇನೆ ಎಂದು ಮೇಘನ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ತಮಗೂ ಕೂಡ ಎಲ್ಲ ಮಹಿಳೆಯರಂತೆ ಮದುವೆಯಾಗುವ ಹಕ್ಕು ಇದೆ ಎಂದು ಅವರು ಹೇಳುತ್ತಾರೆ.
ಇದೊಂದು ಹಿರಿಯರು ಮಾತನಾಡಿಸಿ ಆದ ಮದುವೆಯಾಗಿದ್ದು ಬಸುದೇವ ಕುಟುಂಬದವರಿಂದ ಮದುವೆ ಪ್ರಸ್ತಾಪ ಬಂತು ಎಂದು ಹೇಳುತ್ತಾರೆ.
ಜೋಡಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದೆ.ಭುವನೇಶ್ವರ ನಗರ ಮೇಯರ್ ಸೇರಿದಂತೆ ಹಲವರು ಈ ಮದುವೆಗೆ ಸಾಕ್ಷಿಯಾದರು. ಇತರ ಮದುವೆಗಳಂತೆಯೂ ಇದೂ ಕೂಡ ನಡೆಯಿತು. ಮದುವೆಯಲ್ಲಿ ಅನೇಕ ತೃತೀಯ ಲಿಂಗಿಗಳೂ ಭಾಗವಹಿಸಿದ್ದರು.
ಮದುವೆ ಗಂಡು ಬಸುದೇವ್ ಗೆ ಈ ಹಿಂದೆ ಮದುವೆಯಾಗಿ 4 ಮಕ್ಕಳಿದ್ದಾರೆ. ಮೊದಲ ಪತ್ನಿ ವಿಚ್ಛೇದನ ನೀಡಿದ್ದರಿಂದ ಇದೀಗ ಮೇಘನಾರನ್ನು ಮದುವೆಯಾಗಿದ್ದಾರೆ.ಮೂರು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ದೇಶದಲ್ಲಿ ತೃತೀಯ ಲಿಂಗಿಗಳ ಹಕ್ಕುಗಳ ಕುರಿತು ಮಹತ್ವದ ಆದೇಶ ನೀಡಿದ್ದರು. ಅವರಿಗೆ ಪ್ರತ್ಯೇಕ ಮತದಾನದ ಗುರುತು, ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವುದು, ಚಾಲನಾ ಪರವಾನಗಿ, ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಮೊದಲಾದ ಅವಕಾಶಗಳನ್ನು ನೀಡಿ ಕೋರ್ಟ್ ಆದೇಶ ನೀಡಿತ್ತು.