ಪಾಟ್ನಾ: ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ ಬಿಹಾರ ಸಚಿವರ ವಿರುದ್ಧ ಅಲ್ಲಿನ ಇಮಾರತ್ -ಇ-ಶರಿಯಾ ಫತ್ವಾ ಹೊರಡಿಸಲಾಗಿದೆ.
ಇತ್ತೀಚೆಗಷ್ಟೇ ಆರ್ ಜೆಡಿ ತೊರೆದಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದ್ದರು. ನಿತೀಶ್ ಕುಮಾರ್ ಅವರ ಕಾರ್ಯವನ್ನು ಬೆಂಬಲಿಸಿಕೊಳ್ಳುವ ಪರಿಯಲ್ಲಿ ಬಿಹಾರದ ಸಚಿವ ಫಿರೋಜ್ ಅಹಮದ್ ಅಲಿಯಾಸ್ ಖುರ್ಷಿದ್ ಅವರು ಜೈ ಶ್ರೀರಾಮ್ ಎನ್ನಲು ನಾನು ಹಿಂಜರಿಯುವುದಿಲ್ಲ ಎಂದು ಹೇಳಿದ್ದರು. ಈ ಘೋಷಣೆ ವಿರುದ್ಧ ಕೆಂಗಣ್ಣು ಬೀರಿರುವ ಸ್ಥಳೀಯ ಇಮಾರತ್ -ಇ-ಶರಿಯಾ ಫತ್ವಾ ಹೊರಡಿಸಿದೆ ಎಂದು ತಿಳಿದುಬಂದಿದೆ.
ತಮ್ಮ ವಿರುದ್ದ ಹೊರಡಿಸಲಾಗಿರುಪ ಫತ್ವಾ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಫಿರೋಜ್ 'ನನ್ನ ಕೆಲಸ ಹೇಳುತ್ತದೆ ನಾನು ಯಾರು ಎಂದು. ಇಮಾರತ್ ಶರಿಯಾ ಮೇಲೆ ನನಗೆ ಗೌರವವಿದೆ. ಆದರೆ ಅವರು ಫತ್ವಾ ಹೊರಡಿಸುವ ಮುನ್ನ ನನ್ನ ಉದ್ದೇಶ ಏನು ಎಂದು ಕೇಳಿದ್ದಾರೆಯೇ? ಹೀಗಾಗಿ ನಾನೇಕೆ ಹೆದರಬೇಕು' ಎಂದಿದ್ದಾರೆ.
ಈ ಹಿಂದೆ ಮಹಾಘಟಬಂಧನ್ ಸರ್ಕಾರದಲ್ಲೂ ಸಚಿವರಾಗಿದ್ದ ಫಿರೋಜ್ ಅವರಿಗೆ ಬಿಜೆಪಿ ಮೈತ್ರಿಕೂಟದ ಎನ್‌ಡಿಎ ಮೈತ್ರಿ ಸರ್ಕಾರದಲ್ಲೂ ಅಲ್ಪಸಂಖ್ಯಾತ ಕಲ್ಯಾಣ ಖಾತೆ ನೀಡಲಾಗಿದೆ.
ಈ ಹಿಂದೆ ಕಾರ್ಯಕ್ರಮದವೊಂದರಲ್ಲಿ ಮಾತನಾಡಿದ್ದ ಖುರ್ಷೀದ್, 'ನಾನು ಬಿಹಾರದ ಜನರಿಗಾಗಿ ಜೈ ಶ್ರೀರಾಮ್ ಎಂಬ ಘೋಷಣೆ ಕೂಗುತ್ತೇನೆ. ಅಭಿವೃದ್ಧಿ ಸಾಮರಸ್ಯಕ್ಕಾಗಿ ಇದನ್ನು ಹೇಳಲು ನಾನು ಹಿಂಜರಿಯುವುದಿಲ್ಲ' ಎಂದು ಫಿರೋಜ್ ಅಹಮದ್ ಹೇಳಿದ್ದರು.