ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ನವದೆಹಲಿ: ರೈತರ ಕೃಷಿ ಸಾಲ ಮನ್ನಾಕ್ಕೆ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಹಣ ಕೊಡುವುದಿಲ್ಲ. ಸಾಲ ಮನ್ನದಂತಹ ಯೋಜನೆ ಘೋಷಿಸುವ ರಾಜ್ಯ ಸರ್ಕಾರಗಳೇ ತಮ್ಮ ಸಂಪನ್ಮೂಲದ ಮೂಲಕ ಹಣವನ್ನು ಹೊಂದಿಸಬೇಕೆಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಸೋಮವಾರ ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಎಲ್ಲಾ ರೈತರ ಸಾಲ ಮನ್ನಾ ಮಾಡುವ ಕುರಿತು ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಾಲ ಮನ್ನಾ ಮಾಡುವುದರಿಂದ ರಾಜ್ಯಗಳ ಮೇಲೆ ಉಂಟಾಗುವ ಆರ್ಥಿಕ ಹೊರೆಯಲ್ಲಿ ಕೇಂದ್ರ ಸರ್ಕಾರ ಪಾಲು ಹೊರುವುದಿಲ್ಲ. ಸಾಲ ಮನ್ನಾದ ಸಂಪೂರ್ಣ ವೆಚ್ಚವನ್ನು ಆಯಾ ರಾಜ್ಯ ಸರ್ಕಾರಗಳೇ ಭರಿಸಬೇಕು. ಕೇಂದ್ರ ಸರ್ಕಾರದ ಬೊಕ್ಕಸದಿಂದ ರೈತರ ಕೃಷಿ ಸಾಲ ಮನ್ನಾಕ್ಕೆ ಹಣ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಸಾಲ ಮನ್ನದಂತಹ ಯೋಜನೆ ಘೋಷಿಸುವ ರಾಜ್ಯ ಸರ್ಕಾರಗಳೇ ತಮ್ಮ ಸಂಪನ್ಮೂಲದಿಂದ ಹಣ ಹೊಂದಿಸಬೇಕು ಎಂದು ಈ ಹಿಂದೆಯೇ ನಾನು ಸ್ಪಷ್ಟವಾಗಿ ಹೇಳಿದ್ದೆ. ಇದರಿಂದಾಚೆಗೆ ಕೇಂದ್ರ ಸರ್ಕಾರ ಏನನ್ನೂ ಹೇಳುವುದಕ್ಕೆ ಉಳಿದಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದರೆ ತಾನೂ ಮಾಡುವುದಾಗಿ ರಾಜ್ಯ ಸರ್ಕಾರ ನಿರಂತರವಾಗಿ ಹೇಳಿಕೊಂಡು ಬರುತ್ತಿರುವ ಹಿನ್ನಲೆಯಲ್ಲಿ ಜೇಟ್ಲಿಯವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಉತ್ತಪ್ರದೇಶ ಹಾಗೂ ಮಹಾರಾಷ್ಟ್ರದ ಬಿಜೆಪಿ ಸರ್ಕಾರಗಳು ಸಾಲ ಮನ್ನಾ ನಿರ್ಧಾರ ಘೋಷಣೆ ಮಾಡಿವೆ. ಮಧ್ಯಪ್ರದೇಶದಲ್ಲಿ ಸಾಲ ಮನ್ನಾಕ್ಕಾಗಿ ರೈತರು ಹಿಂಸಾರೂಪದ ಹೋರಾಟವನ್ನೇ ನಡೆಸಿದ್ದಾರೆ. ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ರೈತರು ಸಾಲ ಮನ್ನಾ ಮಾಡುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡಿದರೆ ಹಣಕಾಸು ಪರಿಸ್ಥಿತಿ ಕೈಮೀರಿ ಹೋಗಲಿದೆ. ಹಣದುಬ್ಬರ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದು ಕಳೆದ ವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಣೆ ವೇಳೆ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದರು.