ದೇಶ

ದಾಖಲೆ ಪ್ರಮಾಣಕ್ಕೆ ಕುಸಿದ ಚಿಲ್ಲರೆ ಹಣ ದುಬ್ಬರ!

Srinivasamurthy VN

ನವದೆಹಲಿ: ಕೇವಲ ಒಂದು ತಿಂಗಳಲ್ಲೇ ಚಿಲ್ಲರೆ ಹಣದುಬ್ಬರ ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಏಪ್ರಿಲ್‌ ನಲ್ಲಿ ಶೇ. 2.99ರಷ್ಟಿದ್ದ ಹಣದುಬ್ಬರ ಮೇ ಅಂತ್ಯದ ವೇಳೆಗೆ ಶೇ 2.18ಕ್ಕೆ ಇಳಿದಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರ ನಿನ್ನೆ ಹಣದುಬ್ಬರ ಅಂಕಿ ಅಂಶವನ್ನು ಬಿಡುಗಡೆ ಮಾಡಿದ್ದು, ಕಳೆದ ಏಪ್ರಿಲ್ ತಿಂಗಳಿನಲ್ಲಿ ಶೇ. 2.99ರಷ್ಟಿದ್ದ ಹಣದುಬ್ಬರ ಮೇ ಅಂತ್ಯದ ವೇಳೆಗೆ ಶೇ.2.18ಕ್ಕೆ ಇಳಿಕೆಯಾಗಿದೆ. ಅಂತೆಯೇ ಆರ್‌ ಬಿಐ ನಿಗದಿಪಡಿಸಿದ್ದ  ಮಧ್ಯಮಾವಧಿ ಗುರಿ ಶೇ.4ಕ್ಕಿಂತಲೂ ಪ್ರಸ್ತುತ ಹಣದುಬ್ಬರ ದರ ಕಡಿಮೆಯಾಗಿದೆ. ಚಿಲ್ಲರೆ ಆಹಾರ ವಸ್ತುಗಳ ಬೆಲೆಗಳು ಹಿಂದಿನ ವರ್ಷದ ಇದೇ ಅವಧಿಗಿಂತ ಶೇ 1.05ರಷ್ಟು ಕಡಿಮೆಯಾಗಿವೆ ಎಂದು ಅಂಕಿ ಅಂಶಗಳಿಂದ  ತಿಳಿದುಬಂದಿದೆ.

25 ಮಂದಿ ಆರ್ಥಿಕ ತಜ್ಞರನ್ನು ಒಳಗೊಂಡ ರಾಯಿಟರ್ಸ್ ಸಮೀಕ್ಷೆಯಲ್ಲಿ ಮೇ ತಿಂಗಳಲ್ಲಿ ಗ್ರಾಹಕ ವಸ್ತುಗಳ ಬೆಲೆ ಶೇ 2.60ಕ್ಕೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ವಾಸ್ತವ ದರ ಅದಕ್ಕಿಂತಲೂ  ಕಡಿಮೆಯಾಗಿದ್ದು, 2012ರ ಬಳಿಕ ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರ ದಾಖಲೆ ಮಟ್ಟಕ್ಕೆ ಕುಸಿದಿದೆ. ಇದೇ ವೇಳೆ ಏಪ್ರಿಲ್‌ ನಲ್ಲಿ ಕೈಗಾರಿಕಾ ಉತ್ಪಾದನೆಗಳ ಪ್ರಮಾಣ ಶೇ 3.1ರಷ್ಟು ಏರಿಕೆ ಕಂಡಿತ್ತು.

ಇನ್ನು ಹಣದುಬ್ಬರ ಕುಸಿತ ಬೇಡಿಕೆಯ ಇಳಿಕೆ ಮತ್ತು ದುರ್ಬಲ ಆರ್ಥ ವ್ಯವಸ್ಥೆಯ ಪ್ರತೀಕವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದು,  ಮೇ ತಿಂಗಳ ಅಂಕಿ ಅಂಶಗಳು ಬಡ್ಡಿದರವನ್ನು ಇಳಿಕೆ ಮಾಡುವಂತೆ ಆರ್ ಬಿಐ ಮೇಲೆ  ಒತ್ತಡ ಹಾಕಲು ಕಾರಣವಾಗಬಹುದು ಎಂದು ಹೇಳಿದ್ದಾರೆ. ಅಂತೆಯೇ ಬಡ್ಡಿದರಗಳನ್ನು ಕಡಿತ ಮಾಡುವಂತೆ ಆರ್‌ಬಿಐ ಮೇಲೆ ಒತ್ತಡ ಹೇರುವ ಉದ್ಯಮ ವಲಯ ಹಾಗೂ ವಿತ್ತ ಸಚಿವಾಲಯದ ಬೇಡಿಕೆಗೆ ಬಲ ಬಂದಂತಾಗಿದೆ,  ಕಳೆದ ವಾರವಷ್ಟೇ ಆರ್ಥಿಕ ನೀತಿ ಪ್ರಕಟಿಸಿದ್ದ ಆರ್ ಬಿಐ ಬಡ್ಡಿದರ ಕಡಿತ ಕುರಿತು ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ.

ಅಂತೆಯೇ ಈ ಬಾರಿಯ ಮಾನ್ಸೂನ್ ಮಾರುತಗಳು ಉತ್ತಮ ಮಳೆ ತರಿಸುವ ವಿಶ್ವಾಸ ಕೂಡ ಆರ್ ಬಿಐ ಬಡ್ಡಿದರ ಕಡಿತ ನಿರ್ಧಾರದ ಮೇಲೆ ಪ್ರಭಾವ ಬೀರಿರಬಹುದು ಎಂದು ಹೇಳಲಾಗುತ್ತಿದೆ. ಅಂತೆಯೇ ಚಿಲ್ಲರೆ ಹಣದುಬ್ಬರ  ಇಳಿಕೆ ಪ್ರಮಾಣ ಕೃಷಿಕ ವಲಯಕ್ಕೆ ಮಾರಕ ಎಂದು ಅಭಿಪ್ರಾಯಪಟ್ಟಿರುವ ತಜ್ಞರು ಆರ್ಥಿಕ ಸುಧಾರಣೆ ಮೇಲೆ ಇದು ದುಷ್ಪರಿಣಾ ಬೀರಬಲ್ಲದು ಎಂದು ಹೇಳಿದ್ದಾರೆ.

SCROLL FOR NEXT