ಸ್ವಾಮಿ ಗಣೇಶಾನಂದ ಅಲಿಯಾಸ್ ಹರಿ ಸ್ವಾಮಿ
ತಿರುವನಂತಪುರಂ: ಯುವತಿಯೊಬ್ಬಳು ತನ್ನ ಮೇಲೆ ಅತ್ಯಾಚಾರವೆಸಗಲು ಮುಂದಾದ ಕೇರಳದ ಸ್ವಯಂಘೋಷಿತ ದೇವಮಾನವನ ಮರ್ಮಾಂಗವನ್ನೇ ಕತ್ತರಿಸಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ದೇವಮಾನವನ ವಿರುದ್ಧ ತನ್ನ ಮಗಳು ಸುಳ್ಳು ದೂರು ನೀಡಿದ್ದಾಳೆ ಎಂದು ಸಂತ್ರಸ್ಥೆ ಯುವತಿ ತಾಯಿ ಸೋಮವಾರ ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಯುವತಿ ತಾಯಿ ನೀಡಿದ ಹೇಳಿಕೆಯನ್ನು ಇಂದು ಕೇರಳ ಪೊಲೀಸ್ ಮುಖ್ಯಸ್ಥ ಟಿ ಪಿ. ಸೇನ್ ಕುಮಾರ್ ಅವರಿಗೆ ಸಲ್ಲಿಸಲಾಗಿದ್ದು, ಅತ್ಯಾಚಾರ ಯತ್ನ ಆರೋಪ ಎದುರಿಸುತ್ತಿರುವ ಸ್ವಾಮಿ ಗಣೇಶಾನಂದ ಅಲಿಯಾಸ್ ಹರಿ ಸ್ವಾಮಿ ಮರ್ಮಾಂಗವನ್ನು ಕತ್ತರಿಸಿದ್ದು ನನ್ನ ಮಗಳಲ್ಲ. ಬದಲಾಗಿ ಆಕೆಯ ಬಾಯ್ ಫ್ರೇಂಡ್ ಎಂದು ಸಂತ್ರಸ್ಥೆ ತಾಯಿ ತಿಳಿಸಿದ್ದಾರೆ.
ಈ ಸಂಬಂಧ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಹೊಸ ದೂರು ನೀಡಿರುವ ಸಂತ್ರಸ್ಥೆ ತಾಯಿ, ಸ್ವಯಂ ಘೋಷಿತ ದೇವಮಾನವ ಹರಿ ಸ್ವಾಮಿ ಅವರು ತಮ್ಮ ಮಗಳ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಆಕೆಯ ಬಾಯ್ ಫ್ರೆಂಡ್ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೆ ತನ್ನ ಮಗಳು ಮಾನಸಿಕ ಅಸ್ವಸ್ಥಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಹೇಳಿದ್ದಾರೆ.
ಮೇ 19ರಂದು 54 ವರ್ಷದ ಸ್ವಾಮಿ ಪೂಜೆ ನೆರವೇರಿಸಲು ಯುವತಿಯ ಮನೆಗೆ ತೆರಳಿದ್ದ ವೇಳೆ ರಾತ್ರಿ 12.40ರ ಸುಮಾರಿಗೆ ಅತ್ಯಾಚಾರಕ್ಕೆ ಯತ್ನಿಸಿದ ಶ್ರೀಹರಿಯ ಮರ್ಗಾಂಗವನ್ನು ಕತ್ತರಿಸಿರುವುದಾಗಿ ಯುವತಿ ಪೊಲೀಸರಿಗೆ ದೂರು ನೀಡಿದ್ದಳು.
ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡಿದ್ದು, ಹಲ್ಲೆ ಮಾಡಿದ ಯುವತಿ ವಿರುದ್ಧ ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.