ಶ್ರೀನಗರ: ಸೋಮವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಸೇನಾ ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದ ಮೂವರು ಉಗ್ರರ ಪೈಕಿ ಓರ್ವ ಉಗ್ರ ಕುಖ್ಯಾತ ಉಗ್ರ ಸಂಘಟನೆ ಜೈಶ್ ಇ ಮೊಹಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ ಸೋದರಳಿಯ ಎಂದು ಸೇನಾ ಮೂಲಗಳು ತಿಳಿಸಿವೆ.
ಸೇನಾಧಿಕಾರಿಗಳು ತಿಳಿಸಿರುವಂತೆ ಮಸೂದ್ ಅಜರ್ ನ ಸಹೋದರಿಯ ಪುತ್ರ ತಲ್ಹಾ ರಷೀದ್ ನನ್ನು ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಸೆದೆಬಡಿಯಲಾಗಿದೆ. ತಲ್ಙಾ ರಷೀದ್ ದಕ್ಷಿಣ ಕಾಶ್ಮೀರದ ಪ್ರಾಂತೀಯ ಉಗ್ರ ಕಮಾಂಡರ್ ಆಗಿದ್ದ ಎಂದು ತಿಳಿದುಬಂದಿದೆ. ಅಂತೆಯೇ ಎನ್ ಕೌಂಟರ್ ನಲ್ಲಿ ಹತರಾದ ಮತ್ತಿಬ್ಬರನ್ನು ಕೂಡ ಪ್ರಾಂತೀಯ ಕಮಾಂಡರ್ ಗಳೆಂದು ಗುರುತಿಸಲಾಗಿದ್ದು, ಸ್ಥಳೀಯ ನಿವಾಸಿ ಮಹಮದ್ ಭಾಯ್ ಮತ್ತು ದುರ್ಬಾಗಮ್ ಪ್ರಾಂತ್ಯದ ವಾಸೀಂ ಎಂದು ಸೇನಾಧಿಕಾರಿಗಳು ಗುರುತಿಸಿದ್ದಾರೆ.
ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅಗ್ಲರ್ ಪ್ರದೇಶದ ಕಾಂಡಿ ಎಂಬಲ್ಲಿ ಯೋಧರು ಮತ್ತು ಉಗ್ರಗಾಮಿಗಳ ನಡುವೆ ಎನ್ ಕೌಂಟರ್ ನಡೆದಿದ್ದು, ಸೇನೆಯ ಯೋಧರೊಬ್ಬರು ಕೂಡ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತೆಯೇ ನಿನ್ನೆಯ ಗುಂಡಿನ ದಾಳಿಯಲ್ಲಿ ನಾಗರಿಕರೊಬ್ಬರಿಗೂ ಗಾಯಗಳಾಗಿದ್ದು, ಅವರನ್ನು ಸಮೀಪದ ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವು ಉಗ್ರರು ಅಡಗಿ ಕುಳಿತಿದ್ದ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆ ಯೋಧರು ಕಾಂಡಿ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯ ಆರಂಭಿಸಿದ್ದರು.