ಪಣಜಿ: ಗೋವಾದಲ್ಲಿ ಕರ್ನಾಟಕದ ಲಮಾಣಿ ಸಮುದಾಯದವರಿಗೆ ಮೀನುಗಳ ಚಿಲ್ಲರೆ ಮಾರಾಟಕ್ಕೆ ಇನ್ನು ಮುಂದೆ ಅವಕಾಶ ನೀಡುವುದಿಲ್ಲ ಎಂದು ಗೋವಾ ರಾಜ್ಯದ ಕೃಷಿ ಸಚಿವ ವಿಜಯ್ ಸರ್ದೇಸಾಯಿ ಹೇಳಿದ್ದಾರೆ.
ಇದಕ್ಕೂ ಮುನ್ನ ಗೋವಾದ ಪ್ರವಾಸೋದ್ಯಮ ಇಲಾಖೆ ಸಚಿವ ಮನೋಹರ್ ಅಜೌಂಕರ್ ಲಮಾಣಿ ಸಮುದಾಯಕ್ಕೆ ಮೀನುಗಳ ಮಾರಾಟಕ್ಕೆ ನಿಷೇಧ ಹೇರುವುದಾಗಿ ಹೇಳಿದ್ದರು.
ಕರ್ನಾಟಕ ಮೂಲದ ಲಮಾಣಿ ಸಮುದಾಯ ಮೀನುಗಳ ಚಿಲ್ಲರೆ ಮಾರಾಟ ನಡೆಸುತ್ತಿದ್ದು ಸಮುದ್ರ ತೀರಗಳಲ್ಲಿ ಕಪ್ಪೆಚಿಪ್ಪು, ಮುತ್ತುಗಳಂತಹ ವಸ್ತುಗಳನ್ನು ಮಾರಾಟ ಮಾಡುತ್ತವೆ.
ದಕ್ಷಿಣ ಗೋವಾದ ಮರ್ಗಾವೊ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮೀನುಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಗೋವಾದ ಸ್ಥಳೀಯ ಚಿಲ್ಲರೆ ಮೀನು ಮಾರಾಟಗಾರರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಸರ್ದೇಸಾಯಿ ಈ ಹೇಳಿಕೆ ನೀಡಿದ್ದಾರೆ.
ಸಗಟು ಮಾರುಕಟ್ಟೆಯಲ್ಲಿ ಲಮಾಣಿ ಸಮುದಾಯದ ಚಿಲ್ಲರೆ ಮೀನು ಮಾರಾಟ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೋವಾ ಮೀನುಗಾರಿಕೆ ಸಚಿವ ವಿನೋದ್ ಪಲ್ಯೆಕರ್ ತಿಳಿಸಿದ್ದರು.
ನಿರ್ದಿಷ್ಟ ದೂರುಗಳು ಬಂದ ಹಿನ್ನೆಲೆಯಲ್ಲಿ ಲಮಾಣಿ ಸಮುದಾಯವನ್ನು ನಮೂದಿಸಿದ್ದೆ. ಅದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿಯೂ ಗೋವಾ ಕೃಷಿ ಸಚಿವರು ಹೇಳಿದ್ದಾರೆ.