ದೇಶ

ಜಯಾ ಆಸ್ತಿ ಮೇಲೆ ದೀಪಾ ಹಕ್ಕು: ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Lingaraj Badiger
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ.ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸುತ್ತಿರುವುದನ್ನು ವಿರೋಧಿಸಿ ಜಯಾ ಸಂಬಂಧಿ ದೀಪಾ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಸೋಮವಾರ ತಮಿಳುನಾಡು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಜಯಾ ಸಂಬಂಧಿ ದೀಪಾ ಜಯಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ರವಿಚಂದ್ರಬಾಬು ಅವರು, ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ, ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಿದ್ದಾರೆ.
ಹಿಂದೂ ಉತ್ತರಾಧಿಕಾರಿ ಕಾಯ್ದೆ 1956ರ ಪ್ರಕಾರ ಜಯಲಲಿತಾ ಅವರ ಆಸ್ತಿಯ ಮೇಲೆ ನನಗೆ ಮತ್ತು ನನ್ನ ಸಹೋದರ ಜೆ ದೀಪಕ್ ಅವರಿಗೆ ಹಕ್ಕು ಇದೆ. ಆದರೆ ತಮಿಳುನಾಡು ಸರ್ಕಾರ ನಮ್ಮ ಅನುಮತೆ ಪಡೆಯದೇ ಜಯಲಲಿತಾ ಅವರ ನಿವಾಸ ವೇದ ನಿಲಯಂ ಅನ್ನು ಸ್ಮಾರಕ ಮಾಡಲು ಮುಂದಾಗಿದ್ದು, ಇದನ್ನು ತಡೆಯಬೇಕು ಎಂದು ಕೋರಿ ದೀಪಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಮ್ಮ ಅಜ್ಜಿ ವೇದವಲ್ಲಿ ಅಲಿಯಾಸ್ ಸಂಧ್ಯಾ ಅವರು ಚೆನ್ನೈ ಸುತ್ತಮುತ್ತ ಆಸ್ತಿ ಖರೀದಿಸಿ 1971ರಲ್ಲಿ ನಿಧನರಾದರು. ಬಳಿಕ ಅವರ ಮಕ್ಕಳಾದ ಜಯಕುಮಾರ್ ಮತ್ತು ಜಯಲಲಿತಾ ಅವರು ಪೋಯಸ್ ಗಾರ್ಡನ್ ನಿವಾಸದಲ್ಲಿ ವಾಸಿಸುತ್ತಿದ್ದರು. ಜಯಲಲಿತಾ ಅವರು ಡಿಸೆಂಬರ್ 5, 2016ರಲ್ಲಿ ನಮ್ಮನ್ನು ಅಗಲಿದ್ದು, ನಾನು ಮತ್ತು ನನ್ನ ಸಹೋದರ ದೀಪಕ್ ನಮ್ಮ ಅತ್ತೆಯ ಆಸ್ತಿಗೆ ಉತ್ತರಾಧಿಕಾರಿಗಳಾಗಿರುತ್ತೇವೆ ಎಂದು ದೀಪಾ ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ.
SCROLL FOR NEXT