ಸಂಬಾಲ್ ಎಸ್ ಡಿಎಂ ರಷೀದ್ ಖಾನ್
ಲಖನೌ: ಬಕ್ರೀದ್ ಹಬ್ಬದ ನಿಮಿತ್ತ ಕುರ್ಬಾನಿ ಹೆಸರಲ್ಲಿ ಹಸು, ಗೂಳಿ, ಎಮ್ಮೆ ಹಾಗೂ ಒಂಟೆಯನ್ನು ಬಲಿ ಕೊಟ್ಟರೆ ಅಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿಯ ಕ್ರಮ ಜರುಗಿಸಲಾಗತ್ತದೆ ಎಂದು ಉತ್ತರ ಪ್ರದೇಶದ ಸಂಬಾಲ್ ಎಸ್ ಡಿಎಂ ರಷೀದ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದು, ಅದರ ಅನ್ವಯ ಹಸು, ಎಮ್ಮೆ, ಒಂಟೆ ಹಾಗೂ ಗೂಳಿಗಳನ್ನು ಕೊಲ್ಲುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಪ್ರಾಣಿಗಳ ವಧೆಗೆ ಮುಂದಾದರೆ ಅಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿಯ ಕ್ರಮ ಜರುಗಿಸಲಾಗತ್ತದೆ ಎಂದು ಉತ್ತರ ಪ್ರದೇಶದ ಸಂಬಾಲ್ ಜಿಲ್ಲಾಧಿಕಾರಿ ರಷೀದ್ ಖಾನ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ಅಂತೆಯೇ ಒಂದು ವೇಳೆ ಇಂತಹ ಕೃತ್ಯಗಳು ಬೆಳಕಿಗೆ ಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜುರುಗಿಸಿ ಅವರ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಜಿಲ್ಲಾಡಳಿತ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನವಿದ್ದು, ನಿಷೇಧಿತ ಪ್ರಾಣಿಗಳನ್ನು ಕುರ್ಬಾನಿಗೆ ಬಳಕೆ ಮಾಡುವಂತಿಲ್ಲ. ಗೋ ಹತ್ಯೆ ನಿಷೇಧ ಕಾಯ್ದೆಯಲ್ಲಿ ಒಂಟೆಗಳ ಕುರಿತು ಉಲ್ಲೇಖವಿಲ್ಲವಾದರೂ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಒಂಟೆ ಬಲಿಗೂ ನಿಷೇಧ ಹೇರಲಾಗಿದೆ. ಹೀಗಾಗಿ ನಾವು ಒಂಟೆ ಬಲಿಗೂ ತಡೆ ನೀಡಿದ್ದೇವೆ ಎಂದು ರಷೀದ್ ಖಾನ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಕಳೆದ ವರ್ಷದ ಉದಾಹರಣೆ ನೀಡಿದ ರಷೀದ್ ಖಾನ್ ಅವರು, ಕಳೆದ ವರ್ಷ ಇಡೀ ಸಂಬಾಲ್ ಜಿಲ್ಲೆಯಾದ್ಯಂತ ಒಂದೇ ಒಂದು ಒಂಟೆ ಬಲಿ ನೀಡಿದ ಪ್ರಕರಣ ನಡೆದಿತ್ತು. ಇದೇ ಕಾರಣಕ್ಕೆ ಈ ಬಾರಿ ಒಂಟೆ ಬಲಿಗೂ ತಡೆ ನೀಡಲಾಗಿದೆ ಎಂದು ರಷೀದ್ ಖಾನ್ ಹೇಳಿದ್ದಾರೆ.
2011ರ ಜನಗಣತಿ ಪ್ರಕಾರ ಉತ್ತರ ಪ್ರದೇಶದ ಸಂಬಾಲ್ ನಲ್ಲಿ ಅತೀ ಹೆಚ್ಚು ಪ್ರಮಾಣದ ಅಂದರೆ ಶೇ.77.67ರಷ್ಟು ಮುಸ್ಲಿಮ್ ಧರ್ಮೀಯರಿದ್ದು, ಮೊರಾದ್ ಬಾದ್ ನಲ್ಲಿ ಶೇ.50.80ರಷ್ಟು ಮುಸ್ಲಿಮರಿದ್ದಾರೆ. ಇನ್ನು ರಾಂಪುರ್ ನಲ್ಲಿ ಶೇ.50.57ರಷ್ಟು ಹಾಗೂ ಬಿಜ್ನೋರ್ ನಲ್ಲಿ ಶೇ.43.04ರಷ್ಟು ಮುಸ್ಲಿಂ ಧರ್ಮೀಯರಿದ್ದಾರೆ.