ಗ್ಯಾಂಗ್ ಟಾಕ್: ಸಿಕ್ಕಿಂ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ದೇಶದಲ್ಲಿ ಸುದೀರ್ಗಾವಧಿಯಲ್ಲಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಸಿಪಿಐ(ಎಂ) ನಾಯಕ ನಾಯಕ ದಿವಂಗತ ಜ್ಯೋತಿ ಬಸು ಅವರನ್ನು ಹಿಂದಿಕ್ಕಿ ಚಾಮ್ಲಿಂಗ್ ಈ ದಾಖಲೆ ಮಾಡಿದ್ದಾರೆ.
1977ರಿಂದ 2000 ರವರೆಗೆ ಸತತ 23 ವರ್ಷ (ಜೂನ್ 21, 1977 ರಿಂದ ನವೆಂಬರ್ 6, 2000) ಜ್ಯೋತಿ ಬಸು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು ಇದೀಗ ಚಾಮ್ಲಿಂಗ್ ಈ ದಾಖಲೆ ಮುರಿದಿದ್ದಾರೆ.
ಸಿಕ್ಕಿಂ ಡೆಮಾಕ್ರಾಟಿಕ್ ಫ್ರಂಟ್ ಸಂಸ್ಥಾಪಕ ಅಧ್ಯಕ್ಷ ಚಾಮ್ಲಿಂಗ್ ಭಾನುವಾರದಂದು ಮುಖ್ಯಮಂತ್ರಿಯಾಗಿ 25 ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ಅವರು ಡಿಸೆಂಬರ್ 12, 1994 ರಂದು ಸಿಕ್ಕಿಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಸಿಕ್ಕಿಂ ನ ಯಾಂಗ್ನಂಗ್ ನಲ್ಲಿ 1950 ರ ಸೆಪ್ಟೆಂಬರ್ 22ರಂದು ಜನಿಸಿದ್ದ ಪವನ್ ಕುಮಾರ್ ಚಾಮ್ಲಿಂಗ್ ತನ್ನ 32ನೇ ವಯಸ್ಸಿನಲ್ಲಿ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು.
"ನಾನು ನನ್ನ ರಾಜ್ಯದ ಜನರಿಗಾಗಿ ಇದ್ದೇನೆ. ಅವರು ನನ್ನನ್ನು ವಿಶ್ರಾಂತಿ ಪಡೆಯಬೇಕೆಂದು ಕೇಳಿದರೆ ಅದಕ್ಕೆ ನಾನು ಸಿದ್ದ. ಅಲ್ಲದೆ ಅವರು ನಾನು ಸಿಕ್ಕಿಂ ಸೇವೆಯಲ್ಲಿಯೇ ಮುಂದುವರಿಯಬೇಕೆಂದು ಬಯಸಿದಲ್ಲಿ ನಾನು ಮುಂದುವರಿಯುತ್ತೇನೆ, ಇದರಲ್ಲಿ ನನ್ನ ಸ್ವ ಹಿತಾಸಕ್ತಿ ಏನೂ ಇಲ್ಲ" ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಹೇಳಿದ್ದಾರೆ.
"ನನ್ನ ಜೀವನದ ಪ್ರತಿಯೊಂದು ಹಂತದಲ್ಲಿ ನನ್ನಲ್ಲಿ ನಂಬಿಕೆ ಇಟ್ಟಿರುವ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ" ಎಂದು ಅವರು ಹೇಳಿದರು.