ಭೋಪಾಲ್: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಪೈಕಿ ಮಧ್ಯ ಪ್ರದೇಶ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಸ್ಪಷ್ಟಬಹುಮತದ ಸನಿಹಕ್ಕೆ ಬಂದು ನಿಂತಿವೆ. ಹೀಗಾಗಿ ಎರಡೂ ಪಕ್ಷಗಳಿಂದ ಸರ್ಕಾರ ರಚನೆ ಕಸರತ್ತು ಜೋರಾಗಿಯೇ ಸಾಗಿದೆ.
ಚುನಾವಣಾ ಆಯೋಗ ಪ್ರಕಟಗೊಳಿಸಿರುವ ಫಲಿತಾಂಶದಂತೆ ಕಾಂಗ್ರೆಸ್ ಪಕ್ಷ 114 ಸ್ಥಾನಗಳನ್ನು ಹೊಂದಿದ್ದು, ಸ್ಪಷ್ಟ ಬಹುಮತಕ್ಕೆ 2 ಸ್ಥಾನಗಳ ಅಗತ್ಯವಿದೆ. ಇನ್ನು ಎಸ್ ಪಿ 1 ಸ್ಥಾನ ಹೊಂದಿದ್ದು, ಮಾಯಾವತಿ ನೇತೃತ್ವದ ಬಿಎಸ್ ಪಿ 2 ಸ್ಥಾನಗಳನ್ನು ಹೊಂದಿದೆ. ಈ ಎರಡೂ ಪಕ್ಷಗಳೂ ಕಾಂಗ್ರೆಸ್ ನೇತೃತ್ವದ ಮಹಾಘಟ್ ಬಂಧನ್ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಸಾಧ್ಯತೆಯೇ ಹೆಚ್ಚು. ಅಲ್ಲದೆ ಸಮಾಜವಾದಿ ಪಕ್ಷ ಚುನಾವಣೆಗೂ ಮೊದಲೇ ತಾನು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತೇನೆ ಎಂದು ಘೋಷಣೆ ಮಾಡಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಎಸ್ ಪಿ ಬೆಂಬಲ ನಿಚ್ಚಳ. ಇದಾಗ್ಯೂ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ರಚನೆಗೆ 1 ಸ್ಥಾನ ಕೊರತೆ ಉಂಟಾಗಲಿದ್ದು, ಇದರ ನಿವಾರಣೆಗೆ ಬಿಎಸ್ ಪಿ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ.
ಬಿಎಸ್ ಪಿ ಬೆಂಬಲ ಪಡೆಯುವುದು ಕೈಗೆ ಸುಲಭದ ತುತ್ತಲ್ಲ
ಇನ್ನು ಚುನಾವಣಾ ಪೂರ್ವದಲ್ಲಿ ಇದೇ ಕಾಂಗ್ರೆಸ್ ಪಕ್ಷ ಬಿಎಸ್ ಪಿಯನ್ನು ನಿರ್ಲಕ್ಷ್ಯ ಮಾಡಿತ್ತು ಎಂಬ ಆರೋಪವಿದೆ. ಸ್ಥಾನಗಳ ಹಂಚಿಕೆ ವಿಚಾರದಲ್ಲಿ ಬಿಎಸ್ ಪಿ ಮತ್ತು ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಬಿಎಸ್ ಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಿತ್ತು. ಅಂದು ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಾಯಾವತಿ ಪಕ್ಷ ಇದೀಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದು ಕಷ್ಟಸಾಧ್ಯ. ಒಂದು ವೇಳೆ ಬಿಎಸ್ ಪಿ ಬಿಜೆಪಿ ಬೆಂಬಲ ನೀಡಿದರೂ ಅದು ಸಂಕಷ್ಟಕ್ಕೆ ಸಿಲುಕುವುದು ಖಚಿತ. ಏಕೆಂದರೆ ಬಿಎಸ್ ಪಿಯ ಶಕ್ತಿ ಕೇಂದ್ರವೆಂದೇ ಕರೆಯಲಾಗುವ ಉತ್ತರ ಪ್ರದೇಶದಲ್ಲಿ ಬಿಎಸ್ ಪಿ, ಕಾಂಗ್ರೆಸ್ ಮಿತ್ರ ಪಕ್ಷ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇವರಿಬ್ಬರ ಮೈತ್ರಿ ಫಲವಾಗಿಯೇ ಉತ್ತರ ಪ್ರದೇಶದಲ್ಲಿ ನಡೆದಿದ್ದ ಲೋಕಸಭೆ ಮತ್ತು ವಿಧಾನಸಭೆ ಉಪ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿ ಜಯಭೇರಿ ಭಾರಿಸಿತ್ತು.
ಇದರ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಬಿಎಸ್ ಪಿಯ ವರ್ಚಸ್ಸು ಕೂಡ ಹೆಚ್ಚಿತ್ತು. ಹೀಗಾಗಿ ಮಧ್ಯಪ್ರದೇಶದಲ್ಲಿ ಬಿಎಸ್ ಪಿ ಬಿಜೆಪಿ ಬೆಂಬಲ ನೀಡಿದರೆ ಉತ್ತರ ಪ್ರದೇಶದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ. ಇದೇ ಕಾರಣಕ್ಕೆ ಮಧ್ಯ ಪ್ರದೇಶದಲ್ಲಿ ಬಿಎಸ್ ಪಿ ಬಿಜೆಪಿ ಬೆಂಬಲ ನೀಡುವುದು ಕಷ್ಟಸಾಧ್ಯ. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಪಕ್ಷೇತರ ಅಭ್ಯರ್ಥಿಗಳ ಮುಖಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಆಪರೇಷನ್ ಕಮಲಕ್ಕೆ ಕೈ ಶಾಸಕರು ಒಳಗಾಗದಿದ್ದರೆ ಕಾಂಗ್ರೆಸ್ ಪಕ್ಷಕ್ಕೆೇ ಅಧಿಕಾರ?
ಸದ್ಯ ಕಾಂಗ್ರೆಸ್ಗೆ ಸಿಕ್ಕಿರುವುದು 114 ಸ್ಥಾನ. ಅಲ್ಲಿಗೆ, ಕಾಂಗ್ರೆಸ್ಗೆ ಇನ್ನೂ ಎರಡು ಸ್ಥಾನಗಳ ಕೊರತೆ ಇದೆ. ಬಿಜೆಪಿ ಗೆದ್ದಿರುವುದು 109 ಸ್ಥಾನಗಳಲ್ಲಿ. ಅಂದರೆ ಅದಕ್ಕಿನ್ನೂ 7 ಮಂದಿ ಶಾಸಕರ ಬೆಂಬಲ ಅಗತ್ಯ. ಬಿಎಸ್ಪಿ, ಎಸ್ಪಿ, ಪಕ್ಷೇತರರು ಸಂಖ್ಯೆ 7. ಬಿಜೆಪಿ ಸರ್ಕಾರ ರಚನೆ ಮಾಡಬೇಕಿದ್ದರೆ ಬಿಎಸ್ಪಿ, ಎಸ್ಪಿ, ಪಕ್ಷೇತರರೆಲ್ಲರೂ ಬೆಂಬಲಿಸಬೇಕು. ಆದರೆ ಬಿಜೆಪಿಯನ್ನು ಬೆಂಬಲಿಸಲು ಬಿಎಸ್ಪಿ, ಎಸ್ಪಿಗೆ ಸಿದ್ಧಾಂತ ಅಡ್ಡ ಬರಬಹುದು. ಜತೆಗೆ ಉತ್ತರ ಪ್ರದೇಶದಲ್ಲಿ ಆ ಎರಡೂ ಪಕ್ಷಗಳಿಗೆ ಬಿಜೆಪಿ ಜತೆಗೆ ಇರುವ ವೈರತ್ವವೂ ಅಡ್ಡವಾಗಬಹುದು. ಆಗ ಪಕ್ಷೇತರರೆಲ್ಲರೂ ಬಿಜೆಪಿಯನ್ನು ಬೆಂಬಲಿಸಿದರೂ ಉಪಯೋಗವಿಲ್ಲ.
ಕಾಂಗ್ರೆಸ್ಗೆ ಬಿಎಸ್ಪಿ ಬೆಂಬಲಿಸಿದರೂ ಸಾಕು. ಸರ್ಕಾರ ರಚನೆ ಮಾಡಬಹುದು. ಒಂದು ವೇಳೆ ಎಸ್ಪಿ ಒಂದೇ ಪಕ್ಷ ಬೆಂಬಲಿಸಿದರೂ, ಇನ್ನೊಬ್ಬ ಪಕ್ಷೇತರ ಶಾಸಕರ ಅಗತ್ಯವಾಗಬಹುದು. ಅದೇನು ಅಷ್ಟು ಕಷ್ಟವೇನಲ್ಲ. ಸರ್ಕಾರ ರಚನೆ ಮಾಡಲು ಕಾಂಗ್ರೆಸ್ಗೆ ಸಾಧ್ಯತೆಗಳೆಲ್ಲವೂ ಪೂರಕವಾಗಿಯೇ ಇರುವುದರಿಂದ ಪಕ್ಷೇತರರು ಸಹಜವಾಗಿಯೇ ಆ ಪಕ್ಷವನ್ನು ಬೆಂಬಲಿಸುವ ಸಾಧ್ಯತೆ ಇದೆ. ಆಗ ಕಾಂಗ್ರೆಸ್ ಗೆ ಎಸ್ಪಿ ಮತ್ತು ಬಿಎಸ್ಪಿಯ ಅಗತ್ಯವೇ ಎದುರಾಗದು. ಆದರೆ ಕಾಂಗ್ರೆಸ್ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗಬಾರದು. ಆಗ ಮಾತ್ರ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೇ ಅಧಿಕಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics