ನವದೆಹಲಿ: ಭಾರತ ಶಕ್ತಿ ಕೇಂದ್ರವೆಂದೇ ಗುರುತಿಸಲಾಗುವ ಸಂಸತ್ ಭವನದ ಮೇಲೆ ಭಯೋತ್ಪಾದಕ ದಾಳಿ ನಡೆದು ಇಂದಿಗೆ 17 ವರ್ಷಗಳಾದವು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿ ಹಲವು ಗಣ್ಯರು ಭಯೋತ್ಪಾದಕರ ವಿರುದ್ಧ ಹೋರಾಡಿ ಹುತಾತ್ಮರಾದ ಯೋಧರನ್ನು ಸ್ಮರಿಸಿದ್ದಾರೆ.
2001ರ ಡಿ. 13ರಂದು ಐವರು ಶಸ್ತ್ರಧಾರಿ ಭಯೋತ್ಪಾದಕರು ದೆಹಲಿಯ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು. ಉಗ್ರರು ಮನಬಂದಂತೆ ಗುಂಡು ಹಾರಿಸಿ ಹತ್ತು ಜನರ ಸಾವಿಗೆ ಕಾರಣವಾಗಿದ್ದರು.
ಸಂಸತ್ತಿನ ಭದ್ರತೆಗೆ ನಿಯೋಜಿತರಾಗಿದ್ದ ದೆಹಲಿ ಪೋಲೀಸ್ ಪಡೆಯ ಐವರು ಪೇದೆಗಳು, ಕೇಂದ್ರ ಮೀಸಲು ಪಡೆಯ ಮಹಿಳಾ ಸಿಬ್ಬಂದಿ, ಸಂಸತ್ತಿನಲ್ಲಿದ್ದ ಇಬ್ಬರು ಗಾರ್ಡ್ ಗಳು ಹಾಗೂ ಒಬ್ಬ ತೋಟದ ಮಾಲಿ, ಕ್ಯಾಮರಾ ಮನ್ ಈ ದಾಳಿಯಲ್ಲಿ ಬಲಿಯಾಗಿದ್ದರು.
ಸಂಸತ್ ದಾಳಿ ಸಂಬಂಧ ಯೋಧರನ್ನು ಸ್ಮರಿಸಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು ಈ ದಿನ ನಮ್ಮ ಸಂಸತ್ತಿನ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಹುತಾತ್ಮರಾದವರ ಶೌರ್ಯವನ್ನು ನಾವು ನೆನೆಯುತ್ತೇವೆ. ಆ ವೀರ ಯೋಧರ ಧೈರ್ಯ ಮತ್ತು ನಾಯಕತ್ವವು ದೇಶದ ಪ್ರತಿಯೊಬ್ಬ ನಾಗರಿಕನನ್ನು ಪ್ರೇರೇಪಣೆಗೊಳಿಸಬಲ್ಲದು ಎಂದಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿ ಭಯೋತ್ಪಾದಕರು ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಆದರೆ ಅವರು ಇದರಲ್ಲಿ ಯಶಸ್ವಿಯಾಗಲಿಲ್ಲ ಎಂದಿದ್ದಾರೆ.