ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ಮತ್ತೆ 8 ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಾವಿರಾರು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಡಳಿತ ಮಂಡಳಿ ಇಂದು ಮತ್ತೆ 8 ಅಧಿಕಾರಿಗಳನ್ನು ಅಮಾನತು ಮಾಡಿದೆ. ವಂಚನೆ ಪ್ರಕರಣ ದಾಖಲಾದ ಬ್ರಾಂಚ್ ನ ಜನರಲ್ ಮ್ಯಾನೇಜರ್ ಸೇರಿದಂತೆ ಒಟ್ಟು 8 ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಆ ಮೂಲಕ ಅಮಾನತ್ತಾದ ಅಧಿಕಾರಿಗಳ ಸಂಖ್ಯೆ 18ಕ್ಕೇರಿಕೆಯಾಗಿದೆ. ಬುಧವಾರ ಇದೇ ಪ್ರಕರಣ ಸಂಬಂಧ 10 ಮಂದಿ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿತ್ತು.
ಇನ್ನು ಇದೇ ವೇಳೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಾನು ಇತರೆ ಬ್ಯಾಂಕ್ ಗಳಿಗೆ ನೀಡಬೇಕಿರುವ ಬಾಕಿ ಹಣವನ್ನು ತನ್ನ ಆಂತರಿಕ ಮೂಲಗಳಿಂದ ಮಾರ್ಚ್ 31ರೊಳಗೆ ಪಾವತಿ ಮಾಡುವುದಾಗಿ ಹೇಳಿದೆ.
ಉದ್ಯಮಿ ನೀರವ್ ಮೋದಿ ಪಾಸ್ ಪೋರ್ಟ್ ಅಮಾನತು, ಕುಟುಂಬ ಸದಸ್ಯರ ವಿರುದ್ಧ ಇಂಟರ್ ಪೋಲ್ ನೋಟಿಸ್ ಜಾರಿ
ಏತನ್ಮಧ್ಯೆ ಉದ್ಯಮಿ ಮತ್ತು ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿಯ ಪಾಸ್ ಪೋರ್ಟ್ ಅನ್ನು ಭಾರತ ಸರ್ಕಾರ ಅಮಾನುತ ಮಾಡಿದ್ದು, ನೀರವ್ ಮೋದಿ ಅವರ ಕುಟುಂಬ ಸದಸ್ಯರ ವಿರುದ್ಧ ಇಂಟರ್ ಪೋಲ್ ನೋಟಿಸ್ ಜಾರಿ ಮಾಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ನಡೆದ ರೂ 11,300 ಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನ ದಲ್ಲಿರುವ ವಜ್ರೋದ್ಯಮಿ ನೀರವ್ ಮೋದಿ, ಆತನ ಪತ್ನಿ ಅಮಿ ಮೋದಿ, ಸಹೋದರ ನಿಶಾಲ್ ಮೋದಿ ಹಾಗೂ ಉದ್ಯಮ ಪಾಲುದಾರ ಮತ್ತು ಮಾವ ಮೆಹುಲ್ ಚೊಕ್ಸಿ ವಿರುದ್ಧ ಇಂಟರ್ ಪೋಲ್ ನೋಟಿಸ್ ಜಾರಿಗೊಳಿಸಿದೆ.ಸಿಬಿಐ ಈಗಾಗಲೇ ನೀರವ್ ಮೋದಿ ಹಾಗೂ ಆತನ ಪಾಲುದಾರ ಮೆಹುಲ್ ಚೊಕ್ಸಿಯ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಕೋರಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics