ಜಮ್ಮು: ಜಮ್ಮು-ಕಾಶ್ಮೀರ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ ಎಂಬುದಕ್ಕೆ ರಾಜ್ಯಪಾಲರು ಸರ್ಕಾರದ ವಿರುದ್ಧ ಮಾಡುತ್ತಿರುವ ಟೀಕೆಯೇ ಉದಾಹರಣೆ ಎಂದು ಜಮ್ಮು-ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ರಾಜ್ಯಪಾಲರು ಜಮ್ಮು-ಕಾಶ್ಮೀರದಲ್ಲಿರುವ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವುದು ಸರ್ಕಾರ ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿದೆ ಎಂಬುದನ್ನು ತಿಳಿಸುತ್ತದೆ ಎಂದು ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಜಮ್ಮು-ಕಾಶ್ಮೀರ ಮಾಜಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಅವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ರಾಜ್ಯಪಾಲ ಎನ್ಎನ್ ವೋಹ್ರಾ ರಾಜ್ಯ ಸರ್ಕಾರ ಮತ್ತಷ್ಟು ಸುಧಾರಣೆ ಕಾಣಬೇಕಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಓಮರ್ ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ.
ಪಿಡಿಪಿ-ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯದ ಸ್ಥಿತಿ ಹದಗೆಟ್ಟಿದೆ ಎಂದು ಓಮರ್ ಅಬ್ದುಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.