ದೇಶ

ಆಪ್ ಸರ್ಕಾರದಲ್ಲಿ ಮತ್ತೆ ಬಿಕ್ಕಟ್ಟು; ಸುಪ್ರೀಂ ಆದೇಶದ ಬಳಿಕ ಸರ್ಕಾರದ ಮೊದಲ ಆದೇಶ ತಿರಸ್ಕೃತ!

Manjula VN
ನವದೆಹಲಿ; ಆಡಳಿತ ವಿಚಾರದಲ್ಲಿ ದೆಹಲಿಯ ಆಡಳಿತಾರೂಢ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ತಿಕ್ಕಾಟ ಮತ್ತೆ ಮುಂದುವರೆದಿದ್ದು, ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದ ಬಳಿಕ ಸರ್ಕಾರದ ಮೊದಲ ಆದೇಶವನ್ನು ಲೆಫ್ಟಿನೆಂಟ್ ಗವರ್ನರ್ ತಿರಸ್ಕರಿಸಿದ್ದಾರೆ. 
ಸರ್ಕಾರಿ ಅಧಿಕಾರಿಗಳ ವರ್ಗಾವಣೆಯ ಅಧಿಕಾರವನ್ನು ವಾಪಸ್ ಪಡೆಯುವಂತೆ ಮನವಿ ಸಲ್ಲಿಸಿದ್ದರು, ಸರ್ವಿಸಸ್ ಇಲಾಖೆ ಅದನ್ನು ನಿರಾಕರಿಸಿದ್ದು, ಇಲಾಖೆ ಇನ್ನೂ ಲೆಫ್ಟಿನೆಂಟ್ ಗವರ್ನರ್ ಅವರ ಸುಪರ್ದಿಯಲ್ಲಿಯೇ ಇದೆ ಎಂದು ತಿಳಿಸಿದೆ. 
ಇದಕ್ಕೆ ತೀವ್ರ ಕೆಂಡಾಮಂಡಲಗೊಂಡಿರುವ ಆಪ್ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ನ್ಯಾಯಾಂಗ ನಿಂದನೆ ಮಾಡಿದ್ದು, ಸುಪ್ರೀಂಕೋರ್ಟ ಮೆಟ್ಟಿಲೇರುವುದಾಗಿ ಎಚ್ಚರಿಸಿದೆ. 
ಮುಖ್ಯ ಕಾರ್ಯದರ್ಶಿಗಳು ನನಗೆ ಪತ್ರ ಬರೆದಿದ್ದು, ಸೇವಾ ಇಲಾಖೆ ಸರ್ಕಾರದ ಆದೇಶ ಪಾಲಿಸುವುದಿಲ್ಲ ಎಂದು ತಿಳಿಸಿದೆ ಎಂದು ಮನೀಶ್ ಸಿಸೋಡಿಯಾ ಅವರು ಹೇಳಿದ್ದಾರೆ. 
ಸರ್ಕಾರದ ಆದೇಶವನ್ನು ಇಲಾಖೆ ಪಾಲನೆ ಮಾಡದೇ ಹೋದರೆ, ವರ್ಗಾವಣೆ ಕುರಿತ ಕಡತಗಳು ಲೆಫ್ಟಿನಂಟ್ ಗವರ್ನರ್ ಬಳಿಯೇ ಉಳಿಯುತ್ತವೆ. ಇದು ನ್ಯಾಯಾಂಗ ನಿಂದನೆ ಮಾಡಿದಂತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮುಂದೆ ಏನು ಮಾಡಬಹುದು ಎಂಬುದರ ಕುರಿತಂತೆ ನಮ್ಮ ವಕೀಲರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
ಸರ್ವಿಸಸ್ ಇಲಾಖೆ ಸೇರಿದಂತೆ ಭೂಮಿ, ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆ ಇಲಾಖೆಗಳು ಮೂರು ವಿಚಾರಗಳಲ್ಲಿ ಮಾತ್ರ ಲೆಫ್ಟಿನೆಂಟ್ ಗವರ್ನರ್ ಮಧ್ಯೆ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಆದೇಶಿಸಿದೆ. ಸುಪ್ರೀಂಕೋರ್ಟ್ ಆದೇಶಕ್ಕೆ ಕೇಂದ್ರ ಮತ್ತು ಅಧಿಕಾರಿಗಳು ತಲೆ ಬಾಗುವಂತೆ ಮನವಿ ಮಾಡಿಕೊಳ್ಳುತ್ತೇವೆಂದಿದ್ದಾರೆ. 
ಮುಖ್ಯಮಂತ್ರಿಗಳಿಗೆ ಮಾತ್ರ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರವಿದೆಯೆಂದು ಮನೀಶ್ ಸಿಸೋಡಿಯಾ ಅವರು ಹೇಳಿದ್ದರೂ, ಹೊಸ ಆದೇಶ ಕಾನೂನಾತ್ಮಕವಾಗಿಲ್ಲ ಎಂದಿರುವ ಅಧಿಕಾರಿಗಳು ಅದನ್ನು ಪಾಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 
ಆಮ್ ಆದ್ಮಿ ಸರ್ಕಾರ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನಂತರ ತಿಂಗಳುಗಳಲ್ಲಿ, ಅಂದರೆ 2015ರ ಮೇ ತಿಂಗಳಿನಲ್ಲಿ ಅಧಿಕಾರಿಗಳನ್ನು ವರ್ಗಾವಣೆ, ನೇಮಕಗೊಳಿಸುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಅವರಿಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಬೇಕಿದೆ. ಆದುದರಿಂದ ಕೇವಲ ಕೆಳ ಹಂತದ ಸಿಬ್ಬಂದಿಯನ್ನು ಮಾತ್ರ ದೆಹಲಿ ಸರ್ಕಾರ ವರ್ಗಾವಣೆ ಮಾಡಬಹುದಾಗಿದೆ. ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪಿನ ನಡುವೆಯೂ ಆಮ್ ಆದ್ಮಿ ಸರ್ಕಾರದಲ್ಲಿ ಮತ್ತೆ ಬಿಕ್ಕಟ್ಟು ಎದುರಾಗಿದೆ. 
SCROLL FOR NEXT