ಸಂಸತ್ ಮುಂಗಾರು ಅಧಿವೇಶನ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್, ಟಿಡಿಪಿಅವಿಶ್ವಾಸ ನಿರ್ಣಯ ಮಂಡನೆ
ನವದೆಹಲಿ: ಸಂಸತ್ ನ ಮುಂಗಾರು ಅಧಿವೇಶನ ಜು.18 ರಿಂದ ಪ್ರಾರಂಭವಾಗಿದ್ದು, ಲೋಕಸಭೆಯಲ್ಲಿ ಕಾಂಗ್ರೆಸ್, ಟಿಡಿಪಿ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ.
"ಈ ಸರ್ಕಾರದ ಆಡಳಿತದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಪ್ರತಿ ದಿನ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ಅವಿಶ್ವಾಸ ನಿರ್ಣಯ ಮಂಡಿಸಿರುವ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಆರೋಪಿಸಿದ್ದಾರೆ.
ಸರ್ಕಾರದ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ನಿರ್ಣಯವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಒಪ್ಪಿಗೆ ನೀಡಿದ್ದಾರೆ. ಅವಿಶ್ವಾಸ ನಿರ್ಣಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಅವಿಶ್ವಾಸ ಚರ್ಚೆಗೆ ಸಿದ್ಧ ಎಂದು ಹೇಳಿದ್ದು, ಸಭಾಧ್ಯಕ್ಷರು 10 ದಿನಗಳಲ್ಲಿ ಚರ್ಚೆಗೆ ಸಮಯ ನಿಗದಿ ಮಾಡುವ ನಿರೀಕ್ಷೆ ಇದೆ.
ಸಂಸತ್ ಅಧಿವೇಶನದಲ್ಲಿ ಎಲ್ಲಾ ವಿಚಾರಗಳ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು, ಆದರೆ ವಿಪಕ್ಷಗಳು ಮೋದಿ ಸರ್ಕಾರದ ಹಲವು ನೀತಿಗಳ ವಿರುದ್ಧ ಪ್ರತಿಭಟಿಸಿ ಅವಿಶ್ವಾಸ ನಿರ್ಣಯ ಮಂಡಿಸುತ್ತವೆ ಎಂದು ವಿಶ್ಲೇಷಿಸಲಾಗಿತ್ತು.
ಕಾಂಗ್ರೆಸ್ ಅವಿಶ್ವಾಸ ನಿರ್ಯಣಯ ಮಂಡಿಸಿದರೆ ಸಮಾಜವಾದಿ ಪಕ್ಷ ಹಾಗೂ ಟಿಡಿಪಿ ಸಂಸದರು ಸದನದ ಬಾವಿಗಿಳಿದು, ಜನಸಮೂಹದಿಂದ ನಡೆಯುತ್ತಿರುವ ಹಲ್ಲೆ, ಹತ್ಯೆ ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.