ದೇಶ

ಪಾಟ್ನಾ: ಲಾಲುಗೆ ಸೇರಿದ ನಿರ್ಮಾಣ ಹಂತದಲ್ಲಿದ್ದ ಮಾಲ್ ಇಡಿ ವಶಕ್ಕೆ!

Srinivas Rao BV
ಪಾಟ್ನಾ: ಮೇವು ಹಗರಣದಲ್ಲಿ ಜೈಲು ಸೇರಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಪಾಟ್ನಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮಾಲ್ ನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ. 
ನಿರ್ಮಾಣ ಹಂತದಲ್ಲಿದ್ದ ಮಾಲ್ ಲಾಲೂ ಹಾಗೂ ಅವರ ಕುಟುಂಬದವರ ಬೇನಾಮಿ ಆಸ್ತಿ ಎಂಬ ಆರೋಪದ ಹಿನ್ನೆಲೆಯಲ್ಲಿ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರ ಬಿಹಾರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದಾದ ಒಂದು ವರ್ಷದ ನಂತರ ಮಾಲ್ ನ್ನು ಇಡಿ ವಶಕ್ಕೆ ಪಡೆಯಲಾಗಿದೆ.
ಲಾಲು ಪ್ರಸಾದ್ ಹಾಗೂ ಅವರ ಪುತ್ರ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಲ್ ನ ನಕಾಶೆಗೆ ಅನುಮತಿ ಪಡೆಯದೇ ನಿರ್ಮಾಣವನ್ನು ಪ್ರಾರಂಭಿಸಿದ್ದಾರೆ ಎಂದು ಬಿಜೆಪಿ ನಾಯಕ ಹಾಗೂ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದರು. 
ವರದಿಗಳ ಪ್ರಕಾರ ತೇಜ್ ಪ್ರತಾಪ್ ಯಾದವ್, ತೇಜಸ್ವಿ ಯಾದವ್, ಲಾಲು ಪುತ್ರಿಯರಾದ ಚಂದಾ, ರಾಗಿಣಿ ಮಾಲ್ ನ ನಿರ್ದೇಶಕರಾಗಿದ್ದು, ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರ ಹೆಸರನ್ನು 2017 ರ ಫೆ.14 ರಂದು ನಿರ್ದೇಶಕರ ಪಟ್ಟಿಗೆ ಸೇರಿಸಲಾಗಿತ್ತು. ನಿರ್ಮಾಣ ಹಂತದ ಮಾಲ್ ನ ಮೌಲ್ಯ ಸುಮಾರು 200 ಕೋಟಿ ಎಂದು ಅಂದಾಜಿಸಲಾಗಿದೆ. ಭೂಮಿಯ ಮಾಲಿಕರು ಲಾಲು ಪ್ರಸಾದ್ ಆಗಿದ್ದಾರೆ. 
SCROLL FOR NEXT