ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ
ಹೈದರಾಬಾದ್; ಅಲ್ಪಸಂಖ್ಯಾತರ ವಿರುದ್ದ ಬಿಜೆಪಿ ದ್ವೇಶ ಹಾಗೂ ಕೋಮು ವಿಷವನ್ನು ಹರಡುತ್ತಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿಯವರು ಗುರುವಾರ ಹೇಳಿದ್ದಾರೆ.
ಹಿಂದು-ಮುಸ್ಲಿಂ ದಂಪತಿಗಳಿಗೆ ಅಧಿಕಾರಿಯೊಬ್ಬರು ಪಾಸ್'ಪೋರ್ಟ್ ನಿರಾಕರಿಸಿದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರು, ದಲಿತರು ಹಾಗೂ ಪ್ರಮುಖವಾಗಿ ಮುಸ್ಲಿಮರ ವಿರುದ್ಧ ದ್ವೇಷ, ಕೋಮು ವಿಷವನ್ನು ಹರಡುತ್ತಿದೆ ಎಂದು ಹೇಳಿದ್ದಾರೆ.
ವಯಸ್ಕರ ವಿವಾಹವನ್ನು ಸರ್ಕಾರಿ ಅಧಿಕಾರಿಗಳು ಅಗೌರವದಿಂದ ನೋಡುವಂತಹ ಹಂತಕ್ಕೆ ಪರಿಸ್ಥಿತಿಗಳು ಬಂದು ನಿಂತಿವೆ ಎಂದು ತಿಳಿಸಿದ್ದಾರೆ.
ತಾನ್ವಿ ಸೇಠ್ ಮತ್ತು ಮೊಹಮ್ಮದ್ ಅನಾಸ್ ಸಿದ್ದಿಕ್ಕಿ ಎಂಬ ದಂಪತಿಗಳಿಗೆ ಲಖನೌ ಪಾಸ್'ಪೋರ್ಟ್ ಅಧಿಕಾರಿಯೊಬ್ಬ ಪಾಸ್'ಪೋರ್ಟ್ ನೀಡಲು ನಿರಾಕರಿಸಿದ್ದು, ದಂಪತಿಗಳನ್ನು ಅವಮಾನಿಸಿದ ಪ್ರಕರಣ ಭಾರೀ ಸುದ್ದಿಗೆ ಗ್ರಾಸವಾಗಿತ್ತು.
ದಂಪತಿಗಳು ವಿದೇಶಾಂಗ ಸಚಿವಾಲಯಕ್ಕೂ ದೂರು ನೀಡಿದ್ದರು. ಪ್ರಕರಣ ಸಂಬಂಧ ಕೂಡಲೇ ಕ್ರಮ ಕೈಗೊಂಡ ಅಧಿಕಾರಿಗಳು ಅಧಿಕಾರಿಯನ್ನು ವರ್ಗಾವಣೆಗೊಳಿಸಿ, ದಂಪತಿಗಳಿಗೆ ಪಾಸ್'ಪೋರ್ಟ್ ವಿತರಿಸಿದ್ದಾರೆ.