ದೇಶ

ಲೈಂಗಿಕ ಕಿರುಕುಳ ಪ್ರಕರಣ: ಜೆಎನ್ ಯು ಪ್ರೊಫೆಸರ್ ಗೆ ಜಾಮೀನು

Srinivas Rao BV
ನವದೆಹಲಿ:ಹಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಜೆಎನ್ ಯು ಪ್ರಾಧ್ಯಾಪಕ ಅತುಲ್ ಜೊಹ್ರಿ ಅವರಿಗೆ ದೆಹಲಿ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಬಂಧನಕ್ಕೊಳಗಾಗಿ ಕೆಲವೇ ಕ್ಷಣಗಳಲ್ಲಿ ಜೆಎನ್ ಯು ಪ್ರಾಧ್ಯಾಪಕನಿಗೆ ಮ್ಯಾಜಿಸ್ಟ್ರೇಟ್ ರಿತು ಸಿಂಗ್ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಜೊಹ್ರಿ ವಿರುದ್ಧ ಒಟ್ಟು ಎಂಟು ಎಫ್ಐಆರ್ ದಾಖಲಾಗಿದ್ದು, ತಲಾ 30 ಸಾವಿರ ರುಪಾಯಿ ಬಾಂಡ್ ಮೇಲೆ ಜಾಮೀನು ನೀಡಲಾಗಿದೆ.
ನನ್ನನ್ನು ಜೈಲಿಗೆ ಕಳುಹಿಸಿದ್ರೆ ನನ್ನ ವೃತ್ತಿ ಜೀವನಕ್ಕೆ ತೊಂದರಯಾಗುತ್ತದೆ. ಹೀಗಾಗಿ ಜಾಮೀನು ನೀಡುವಂತೆ ಪ್ರೊ.ಜೊಹ್ರಿ ಮಾಡಿದ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.
ಪ್ರಾಧ್ಯಾಪಕ ಜೊಹ್ರಿ ವಿರುದ್ಧ 9 ವಿದ್ಯಾರ್ಥಿನಿಯರು ದೂರು ದಾಖಲಿಸಿದ್ದು ಪೊಲೀಸ್ ಅಧಿಕಾರಿಗಳು 8 ಎಫ್ಐಆರ್ ದಾಖಲಿಸಿದ್ದಾರೆ. 
ದೂರು ನೀಡಿರುವ ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇನ್ನೂ ಹಲವು ವಿದ್ಯಾರ್ಥಿನಿಯರು ತಮಗೂ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪ ಮಾಡಿದ್ದಾರೆ. ಅವರ ಆರೋಪವನ್ನೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
ಪ್ರಾಧ್ಯಾಪಕನ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಾಧ್ಯಾಪಕರನ್ನು ಬಂಧಿಸಿದ್ದರು.
SCROLL FOR NEXT