ನವದೆಹಲಿ: ದೇಶದ ಮೊಟ್ಟ ಮೊದಲ ಮಹಿಳಾ ವೈದ್ಯೆ ಆನಂದಿಬಾಯಿ ಅವರ ಜನ್ಮ ದಿನಾಚರಣೆಯನ್ನು ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಮೂಲಕ ಸಂಭ್ರಮಿಸಿದೆ.
31-03-1865ರಲ್ಲಿ ಪುಣೆಯಲ್ಲಿ ಜನಿಸಿದ ಆನಂದಿಬಾಯಿ ಅವರ ಮೂಲ ಹೆಸರು ಯಮುನಾ ಎಂದು. ಪಾರಂಪರಿಕ ನೆಲೆಗಟ್ಟನ್ನು ಮೀರಿ ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮೊದಲ ಮಹಿಳಾ ವೈದ್ಯೆ ಆನಂದಿ ಬಾಯಿ ಅವರಾಗಿದ್ದಾರೆ. ಅಲ್ಲದೇ, ಪಾಶ್ಟಾತ್ಯ ವೈದ್ಯಕೀಯ ಪದವಿ ಪಡೆದ ಮತ್ತು ಅಮೆರಿಕಾದ ನೆಲದ ಮೇಲೆ ನಡೆದ ಮೊಟ್ಟಮೊದಲ ಹಿಂದೂ ಮಹಿಳೆ ಎಂಬ ಕೀರ್ತಿಗೂ ಭಾಜನರಾಗಿದ್ದರು. ಪುಣೆಯ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ಆನಂದಿ ಬಾಯಿ ತಮ್ಮ 9ನೇ ವಯಸ್ಸಿನಲ್ಲಿ ಮದುವೆಯಾದರು.
ತಮಗಿಂತಲೂ ಇಪ್ಪತ್ತು ವರ್ಷ ದೊಡ್ಡವರಾದ ಗೋಪಾಲ್ ರಾವ್ ಅವರನ್ನು ಆನಂದಿ ಬಾಯಿ ಅವರು ವರಿಸಿದರು. ಮದುವೆಯ ನಂತರ ಇವರ ಹೆಸರು ಯಮುನಾ ದಿಂದ ಆನಂದಿಬಾಯಿ ಎಂದು ಬದಲಾಯಿತು. ಇವರ ಪತಿ ಗೋಪಾಲ್ ರಾವ್ ರವರು ಮಹಾರಾಷ್ಟ್ರದ ಕಲ್ಯಾಣದಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ತದನಂತರ ಇವರು ಅಲಿಬಾಗ್ ಮತ್ತು ಕೋಲ್ಕತ್ತಾಗೆ ವರ್ಗಾವಣೆ ಆಯಿತು. ಗೋಪಾಲ್ ರಾವ್ ರವರು ಆ ಕಾಲದಲ್ಲೇ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡಬೇಕು ಎಂಬ ಮನೋಭಾವದವರಾಗಿದ್ದರು. ಆನಂದಿಬಾಯಿ ಅವರ ಚುರುಕುತನವನ್ನು ನೋಡಿ, ಅವರ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು. ಆನಂದಿಬಾಯಿ ಯವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು, ಆದರೆ ಉತ್ತಮ ಚಿಕಿತ್ಸಾ ಸೌಲಭ್ಯಗಳಿಲ್ಲದ ಕಾರಣ, ಹತ್ತು ದಿನಗಳ ನಂತರ ಮಗು ಕೊನೆಯುಸಿರೆಳೆಯಿತು. ಇದು ಆನಂದಿಬಾಯಿ ಯವರ ಜೀವನದಲ್ಲಿನ ಬಹುಮುಖ್ಯ ಘಟ್ಟ. ಅಂದೇ ಅವರಲ್ಲಿ ವೈದ್ಯರಾಗಬೇಕು ಎಂಬ ಛಲ ಹುಟ್ಟಿಸಿತು.
ಪತಿ ಗೋಪಾಲ್ ರಾವ್ ಅವರ ಸಹಕಾರದಿಂದ ಆನಂದಿಬಾಯಿ ರವರು ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆಯಲು ಸಿದ್ಧರಾದರು. ಅದಕ್ಕಾಗಿ ಅವರ ಪತಿ 1880 ರಲ್ಲಿ ಅಮೇರಿಕಾದ ಮಿಷನರಿ, ರಾಯಲ್ ವೆಲ್ದೆರ್ ಗೆ ಪತ್ರವನ್ನು ಬರೆದರು. ಆನಂದಿಬಾಯಿ ಅವರ ಈ ನಿರ್ಧಾರಕ್ಕೆ ಅನೇಕ ಬ್ರಾಹ್ಮಣ ಸಮಾಜದವರು ವಿರೋಧವನ್ನು ವ್ಯಕ್ತಪಡಿಸಿದರು. ಆದರೆ ಪತಿಯ ನಿರಂತರ ಬೆಂಬಲ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. 1883 ರಲ್ಲಿ ಕೊನೆಗೂ ಅವರು ಅಮೆರಿಕಾಕ್ಕೆ ತೆರಳಿದರು. ಅಲ್ಲಿನ ಡ್ರೆಕ್ಸೆಲ್ ಮಹಿಳಾ ವೈದ್ಯಕೀಯ ವಿಶ್ವವಿದ್ಯಾನಿಲಯವನ್ನು ಸೇರಿಕೊಂಡರು. ಆನಂದಿಬಾಯಿ ರವರು ಯಾವಾಗಲು ನಿಶಕ್ತಿ, ತಲೆನೋವು, ಶೀತ, ಜ್ವರದಿಂದ ಬಳಲುತ್ತಿದ್ದರು. ಆದರೂ ಧೃತಿಗೆಡದೇ ಓದಿನತ್ತ ಗಮನ ಹರಿಸಿದರು.
ಎಲ್ಲಾ ಕಷ್ಟಗಳ ನಡುವೆ ಕೊನೆಗೂ ಮಾರ್ಚ್ 11, 1883ರಲ್ಲಿ ವೈದ್ಯಕೀಯ ಪದವಿಯನ್ನು ಪಡೆದರು. ಇವರ ಈ ಸಾಧನೆಯನ್ನ ರಾಣಿ ವಿಕ್ಟೋರಿಯ ರವರೂ ಸಹ ಹೊಗಳಿದ್ದು ವಿಶೇಷವಾಗಿದೆ. ತದನಂತರ ಭಾರತಕ್ಕೆ ವಾಪಸ್ಸಾದ ಇವರಿಗೆ ಅದ್ಧೂರಿ ಸ್ವಾಗತವನ್ನು ಕೋರಲಾಯಿತು. ಇವರನ್ನು ಮಹಾರಾಷ್ಟ್ರದ ಕೊಲ್ಹಾಪುರದ ಆರ್.ಸಿ.ಎಸ್.ಎಮ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಿ.ಪಿ. ಆರ್ ಆಸ್ಪತ್ರೆಯ ಮಹಿಳಾ ವಿಭಾಗದ ಮುಖ್ಯಸ್ಥರನ್ನಾಗಿ ಮಾಡಲಾಯಿತು.
ದುರದೃಷ್ಟವಶಾತ್, ಆನಂದಿಬಾಯಿ ರವರು ತಮ್ಮ ಇಪ್ಪತ್ತೆರಡನೆ ವಯಸ್ಸಿನಲ್ಲಿಯೇ ಅನಾರೋಗ್ಯದ ಕಾರಣ ಕೊನೆಯುಸಿರೆಳೆದರು. ಫೆಬ್ರುವರಿ 26 1887 ರಲ್ಲಿ ವಿಧಿವಶರಾದರು. ಅವರ ಸಾವಿಗೆ ಇಡೀ ದೇಶವೇ ಮರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics