ರಾಲೆಗಣ್ ಸಿದ್ದಿ(ಮಹಾರಾಷ್ಟ್ರ): ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ಇಂದಿನಿಂದ (ಅಕ್ಟೋಬರ್ 2) ನಡೆಸಲುದ್ದೇಶಿಸಿದ್ದ ಉಪವಾಸ ಸತ್ಯಾಗ್ರಹವನ್ನು ಮುಂದೂಡಿದ್ದಾರೆ.
ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರೊಡನೆ ಮಾತುಕತೆ ನಡೆಸಿದ ಬಳಿಕ ಅಣ್ಣಾ ಹಜಾರೆ ತನ್ನ ನಿಯೋಜಿತ ಉಪವಾಸ ಸತ್ಯಾಗ್ರಹ ಮುಂದೂಡಿರುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಈ ವರ್ಷ ಜುಲೈ ನಲ್ಲಿ ಅಣ್ಣಾ ಹಜಾರೆ ತಾವು ಅಕ್ಟೋಬರ್ 2ರಿಂದ ಉಪವಾಸ ಸ್ತ್ಯಾಗ್ರಹ ಹೂಡುವುದಾಗಿ ಘೋಷಿಸಿದ್ದರು. ಕೇಂದ್ರ ಸರ್ಕಾರ ಲೋಕಪಾಲ್ ನೇಮಕ ವಿಳಂಬ ಮಾಡುತ್ತಿದೆ, ಲೋಕಪಾಲ್ ಕಾಯ್ದೆ ಜಾರಿಗೆ ಸಮ್ಮತಿಸುತ್ತಿಲ್ಲ ಹೀಗಾಗಿ ಇದನ್ನು ಖಂಡಿಸಿ ತಾನು ಮಹಾರಾಷ್ಟ್ರದ ರಾಲೆಗಣ್ ಸಿದ್ದಿಯಲ್ಲಿ ಉಪವಾಸ ಸತ್ಯಾಗ್ರಹ ಕುಳಿತು ಹೋರಾಟ ಪ್ರಾರಂಭಿಸುತ್ತೇನೆ ಎಂದು ಘೋಷಿಸಿದ್ದರು.
ಇದಾಗಲೇ ಸಂಸತ್ತಿನಲ್ಲಿ ಅನುಮೋದನೆ ಪಡೆದು 2014ರ ಜನವರಿಯಲ್ಲಿ ರಾಷ್ಟ್ರಪತಿಗಳಿಂದ ಅಂಕಿತಗೊಂಡ ಲೋಕಪಾಲ್ ಮಸೂದೆ ಜಾರಿಯ ಕುರಿತಂತೆ ಕೇಂದ್ರ ಸರ್ಕಾರ ಯಾವ ಸ್ಪಷ್ಟ ನಿಲುವು ತಳೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
"ಭ್ರಷ್ಟಾಚಾರವನ್ನು ನಿವಾರಿಸಲು ಈ ಸರ್ಕಾರಕ್ಕೆ ಇಚ್ಚಾಶಕ್ತಿಯ ಕೊರತೆ ಇದೆ.ಇದಕ್ಕೆ ಬಹಳಷ್ಟು ಕಾರಣಗಳನ್ನು ಹೇಳುವ ಮೂಲಕ ಲೋಕಪಾಲ್ ಜಾರಿಯನ್ನು ವಿಳಂಬ ಮಾಡುತ್ತಿದೆ"
ಲೋಕಪಾಲ ಚಳವಳಿಯ ಮುಂಚೂಣಿಯಲ್ಲಿದ್ದ ಅಣ್ಣಾ ಹಜಾರೆ 2011 ರಲ್ಲಿ 12 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಲೋಕಪಾಲ್ ಪರವಾಗಿ ಅಣ್ಣಾ ಹೋರಾಟ ರಾಷ್ಟ್ರಾದ್ಯಂತ ಅಪಾರ ಮನ್ನಣೆ ಗಳಿಸಿಕೊಂಡಿತ್ತು. ಇದರ ಫಲವಾಗಿ ಯುಪಿಎ ಸರ್ಕಾರ ಲೋಕಪಾಲ ಮಸೂದೆ ಅಂಗೀಕರಿಸಿತು.