ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟಿಕ್ ಟಾಕ್ ಆ್ಯಪ್ ಗೆ ಯುವಕನೊಬ್ಬ ಬಲಿಯಾಗಿದ್ದು, ಗನ್ ಹಿಡಿದು ಟಿಕ್ಟಾಕ್ ವಿಡಿಯೋ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ 19 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಸಲ್ಮಾನ್, ಸೋಹಾಲಿ ಹಾಗೂ ಅಮೀರ್ ಎಂಬುವವರು ಇಂಡಿಯಾ ಗೇಟ್ಗೆ ಕಾರು ಚಲಾಯಿಸಿಕೊಂಡು ಹೋಗಿದ್ದರು. ಅಲ್ಲಿಗೆ ಭೇಟಿ ನೀಡಿ ವಾಪಾಸಾಗುವಾಗ ಸೋಹಾಲಿ ಗನ್ ಹೊರತೆಗೆದಿದ್ದ. ಈ ವೇಳೆ ಸಲ್ಮಾನ್ ತಲೆಗೆ ಗುರಿ ಇಟ್ಟು ಸೋಹಾಲಿ ಟಿಕ್ ಟಾಕ್ ವಿಡಿಯೋ ಮಾಡಲು ಮುಂದಾಗಿದ್ದ. ಈ ವೇಳೆ ಅಚಾನಕ್ಕಾಗಿ ಗುಂಡು ಹಾರಿದೆ.
ಇದರಿಂದ ಆತಂಕಕ್ಕೆ ಒಳಗಾದ ಸೋಹಾಲಿ ಹಾಗೂ ಅಮೀರ್ ಸಂಬಂಧಿಗಳ ಮನೆಗೆ ತೆರಳಿದ್ದಾರೆ. ಅಲ್ಲಿ ಬಟ್ಟೆ ಬದಲಾಯಿಸಿಕೊಂಡು ಸಲ್ಮಾನ್ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಗಲೇ ಸಲ್ಮಾನ್ ಕೊನೆಯುಸಿರೆಳೆದಿದ್ದ.
ಸೋಹಾಲಿ ಹಾಗೂ ಅಮೀರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಇದು ಅಚಾನಕ್ಕಾಗಿ ನಡೆದ ಘಟನೆಯೋ ಅಥವಾ ಸಲ್ಮಾನ್ನನ್ನು ಹತ್ಯೆಗೈಯ್ಯುವ ಉದ್ದೇಶ ಇವರಿಗೆ ಇತ್ತೋ ಎನ್ನುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಇಬ್ಬರು ಯುವಕರು ಪೊಲೀಸರ ವಶದಲ್ಲಿದ್ದಾರೆ.