ದೇಶ

ಪ್ರಧಾನಿ ಮೋದಿ ರಾಜಧರ್ಮ ಪಾಲಿಸುತ್ತಿಲ್ಲ, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ: ಆಂಧ್ರ ಸಿಎಂ ನಾಯ್ಡು

Srinivasamurthy VN
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದ್ವೇಷದ ರಾಜಕಾರಣ ಮಾಡುತ್ತಿದ್ದು ರಾಜಧರ್ಮ ಪಾಲನೆ ಮಾಡುತ್ತಿಲ್ಲ ಎಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ದೆಹಲಿಯಲ್ಲಿ ಟಿಡಿಪಿ ಪಕ್ಷ ಆಯೋಜಿಸಿರುವ 'ಧರ್ಮ ಹೋರಾಟ ದೀಕ್ಷಾ' ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಚಂದ್ರಬಾಬು ನಾಯ್ಡು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 
2014 ರಲ್ಲಿ ಆಂಧ್ರಪ್ರದೇಶವು ವಿಭಜನೆಯಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶವೆಂಬ ಎರಡು ರಾಜ್ಯಗಳು ಸೃಷ್ಟಿಯಾದಾಗ ಆಂಧ್ರದಪ್ರದೇಶಕ್ಕೆ ಅನ್ಯಾಯವಾಗಿದೆ ಎಂದು ನಾಯ್ಡು ದೂರಿದ್ದಾರೆ. ಆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಅಭಯ ನೀಡಿದ್ದರು. ಆದರೆ ಅವರು ತಮ್ಮ ಮಾತನ್ನು ಉಳಿಸಿಕೊಂಡಿಲ್ಲ. ಅವರು ದ್ವೇಷದ ರಾಜಕೀಯದಲ್ಲಿ ತೊಡಗಿದ್ದು, ರಾಜಧರ್ಮ ಪಾಲನೆ ಮಾಡುತ್ತಿಲ್ಲ ಎಂದು ಅವರು ದೂರಿದರು.
2002ರಲ್ಲೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ಗುಜರಾತ್ ನಲ್ಲಿ ರಾಜಧರ್ಮ ಪಾಲನೆಯಾಗುತ್ತಿಲ್ಲ ಎಂದು ದೂರಿದ್ದರು. ಇದೀಗ ಮತ್ತದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರಧಾನಿ ಹುದ್ದೆಯಲ್ಲಿದ್ದಾರೆ. ಈಗಲೂ ಅದೇ ಛಾಳಿ ಮುಂದುವರೆಸಿದ್ದು, ರಾಜಧರ್ಮ ಪಾಲನೆ ಮಾಡುತ್ತಿಲ್ಲ ಎಂದು ಹೇಳಿದರು. ಅಂತೆಯೇ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನಮ್ಮ ಹಕ್ಕು ಅದನ್ನು ಸಾಧಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನೀವು ನೀಡದಿದ್ದರೆ ಅದನ್ನು ಹೇಗೆ ಸಾಧಿಸಬೇಕು ಎಂಬುದು ನಮಗೆ ಗೊತ್ತು ಎಂದು ಹೇಳಿದರು.
ಇನ್ನು ಇಂದಿನ ಧರಣಿಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಮತ್ತಿತ್ತರ ವಿಪಕ್ಷ ನಾಯಕರು ಪಾಲ್ಗೊಳ್ಳಲ್ಲಿದ್ದಾರೆ ಎಂದು ತಿಳಿದುಬಂದಿದೆ.
SCROLL FOR NEXT