ದೇಶ

ಪ್ರಧಾನಿ ಕಚೇರಿ ಸಚಿವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಮಾಹಿತಿ ನೀಡುತ್ತಿಲ್ಲ: ಆರ್ ಟಿಐ ಕಾರ್ಯಕರ್ತ

Lingaraj Badiger
ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ  ಮೊದಲ ಅವಧಿಯಲ್ಲಿ ಕೇಂದ್ರ ಸಚಿವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಮಾಹಿತಿ ನೀಡಲು ಪ್ರಧಾನಿ ಕಚೇರಿ ನಿರಾಕರಿಸಿದೆ ಎಂದು ಆರ್ ಟಿಐ ಕಾರ್ಯಕರ್ತರೊಬ್ಬರು ಗುರುವಾರ ಹೇಳಿದ್ದಾರೆ.
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರ ವಿರುದ್ಧ ತಮಗೆ ಬಂದಿರುವ ದೂರುಗಳ ಮಾಹಿತಿ ನೀಡುವಂತೆ ಕೋರಿ ಆರ್ ಟಿಐ ಕಾಯ್ದೆ 7(9)ರಡಿ ಅನಿಲ್ ಗಲಗಲಿ ಎಂಬುವರರು ಪ್ರಧಾನಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 
ಮಾಹಿತಿ ನೀಡಲು ನಿರಾಕರಿಸಿರುವ ಪ್ರಧಾನಿ ಕಾರ್ಯಾಲಯ, ಪಿಎಂಒ ಸಚಿವರ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಮತ್ತು ಇತರೆ ದೂರುಗಳನ್ನು ಸ್ವೀಕರಿಸುತ್ತದೆ. ಆದರೆ ಒಂದೇ ಮಾಸ್ಟರ್ ಫೈಲ್ ನಲ್ಲಿ ಸಂಗ್ರಹಿಸುವುದಿಲ್ಲ ಎಂದು ಪ್ರಧಾನಿ ಕಚೇರಿಯ ಅಧೀನ ಕಾರ್ಯದರ್ಶಿ ಪ್ರವೀಣ್ ಅವರು ಆರ್ ಟಿಐಗೆ ಉತ್ತರಿಸಿದ್ದಾರೆ.
ಸಚಿವರ ವಿರುದ್ಧ ಬಂದಿರುವ ದೂರುಗಳು ಅನಾಮಧೇಯ ಸ್ವರೂಪದ್ದಾಗಿರುತ್ತವೆ ಮತ್ತು ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಪರಿಶೀಲಿಸಲು ಅವರು ಸಲ್ಲಿಸಿದ ಪೂರಕ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಹಲವು ಉನ್ನತ ಮಟ್ಟದ ಭ್ರಷ್ಟ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡುತ್ತಿರುವ ಕೇಂದ್ರ ಸರ್ಕಾರ, ಸಚಿವರ ವಿರುದ್ಧದ ಭ್ರಷ್ಟಾಚಾರ ದೂರುಗಳ ಬಗ್ಗೆ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅನಿಲ್ ಗಲಗಲಿ ಅವರು ಪ್ರಶ್ನಿಸಿದ್ದಾರೆ.
SCROLL FOR NEXT