ದೇಶ

ರಾಜಕೀಯ ಲಾಭಕ್ಕೆ ಸೇನೆಯ ಬಳಕೆ ತಪ್ಪಿಸಿ: ಚುನಾವಣಾ ಆಯೋಗಕ್ಕೆ ನೌಕಾಪಡೆ ಮಾಜಿ ಮುಖ್ಯಸ್ಥರ ಮನವಿ

Srinivasamurthy VN
ನವದೆಹಲಿ: ರಾಜಕೀಯ ಲಾಭಕ್ಕಾಗಿ ಸೇನೆಯನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ, ಈ ಬಗ್ಗೆ ಕೂಡಲೇ ಚುನಾವಣಾ ಆಯೋಗ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ನೌಕಾಪಡೆಯ ನಿವೃತ್ತ ಸೇನಾಮುಖ್ಯಸ್ಥ ಅಡ್ಮಿರಲ್ ಎನ್. ರಾಮದಾಸ್ ಹೇಳಿದ್ದಾರೆ.
ಈ ಬಗ್ಗೆ ಚುನಾವಣಾ ಆಯೋಗಕ್ಕೆ ಬಹಿರಂಗ ಪತ್ರ ಬರೆದಿರುವ ಅಡ್ಮಿರಲ್ ಎನ್. ರಾಮದಾಸ್ ಅವರು, 'ರಾಜಕೀಯ ಲಾಭಕ್ಕಾಗಿ ಸಶಸ್ತ್ರ ಪಡೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಪುಲ್ವಾಮ ಘಟನೆ ಹಾಗೂ ನಂತರದ ಬಾಲಾಕೋಟ್ ವಾಯುದಾಳಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದ್ದು, ಇದು ಸಶಸ್ತ್ರ ಪಡೆಗಳ ತತ್ವಗಳಿಗೆ ವಿರುದ್ಧವಾದದ್ದು ಎಂದು ಕಿಡಿಕಾರಿದ್ದಾರೆ. 
'ಸಶಸ್ತ್ರ ಪಡೆಗಳು ರಾಜಕೀಯ ರಹಿತವಾಗಿದ್ದು, ಸದಾ ಜಾತ್ಯತೀತ ತತ್ವಗಳನ್ನು ಅನುಸರಿಸುತ್ತವೆ. ಆದರೆ ಇತ್ತೀಚಿನ ಬೆಳವಣಿಗೆಳು ತೀರಾ ಆತಂಕಕಾರಿಯಾಗಿದ್ದು, ರಾಜಕೀಯ ಉದ್ದೇಶಕ್ಕೆ ಸೇನಾಪಡೆಗಳ ಬಳಕೆ ಸರಿಯಲ್ಲ. ಕೆಲವೇ ವಾರಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇತ್ತೀಚಿನ ಘಟನೆಗಳನ್ನು ರಾಜಕೀಯ ಪಕ್ಷಗಳು ವಿಜಯ ಮತ್ತು ಹುಸಿರಾಷ್ಟ್ರಪ್ರೇಮದ ಸಂದೇಶವನ್ನಾಗಿ ಬಳಸಿಕೊಳ್ಳುವುದನ್ನು ತಡೆಯಬೇಕು ಎಂದು ಎನ್ ರಾಮದಾಸ್ ಹೇಳಿದ್ದಾರೆ.
ಅಂತೆಯೇ 'ಮತದಾರರ ಮೇಲೆ ಪ್ರಭಾವ ಬೀರಲು, ಪಾಕಿಸ್ತಾನದ ಮೇಲೆ ನಡೆದ ವಾಯುದಾಳಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ತೀವ್ರ ಕಳವಳ ಮತ್ತು ಬೇಸರ ವ್ಯಕ್ತಪಡಿಸಿರುವ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಎನ್. ರಾಮದಾಸ್, "ರಾಜಕೀಯ ಲಾಭಕ್ಕಾಗಿ ಸೇನೆಯನ್ನು ಬಳಸಿಕೊಳ್ಳುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು' ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದರೆ.
ಅಡ್ಮಿರಲ್ ರಾಮದಾಸ್ ಅವರು 1990 ರಿಂದ 1993ರವರೆಗೆ ನೌಕಾಪಡೆಯ ಮುಖ್ಯಸ್ಥರಾಗಿದ್ದವರು ಹಾಗೂ 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ವೇಳೆ ಪೂರ್ವ ಪಾಕಿಸ್ತಾನ ಪ್ರದೇಶದ ನೌಕಾಪಡೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ವೇಳೆ ಪಾಕಿಸ್ತಾನ 90 ಸಾವಿರ ಬಾಂಗ್ಲಾ ಸೈನಿಕರನ್ನು ಸ್ಥಳಾಂತರಿಸದಂತೆ ನಿರ್ಬಂಧಿಸಲಾಗಿತ್ತು. ಬಳಿಕ ಅವರು ಭಾರತೀಯ ಸೇನೆಗೆ ಶರಣಾಗತರಾಗಿದ್ದರು. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ವಹಿಸಿದ ಪಾತ್ರಕ್ಕಾಗಿ ರಾಮದಾಸ್ ಅವರಿಗೆ ವೀರಚಕ್ರ ಪ್ರಾಪ್ತವಾಗಿತ್ತು. 
SCROLL FOR NEXT