ದೇಶ

ಬಿಜೆಪಿಯೇತರ ಸರ್ಕಾರ ರಚನೆ ಮಾಡುತ್ತಿರುವುದು ಹಲವರಿಗೆ ಹೊಟ್ಟೆನೋವು ತರಿಸಿದೆ: ಶಿವಸೇನೆ 

Sumana Upadhyaya

ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದ ಶಿವಸೇನೆ 

ಮುಂಬೈ: ಆರಂಭದಲ್ಲಿ ಹಿಂದೇಟು ಹಾಕಿದ್ದ ಬಿಜೆಪಿ ಇದೀಗ ಕುದುರೆ ವ್ಯಾಪಾರದ ಮೂಲಕ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಲು ಹವಣಿಸುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.


ಅದು ತನ್ನ ಮುಖವಾಣಿ ಸಾಮ್ನಾದಲ್ಲಿ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ಸಹ ಟೀಕಿಸಿದೆ. ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ಪಕ್ಷ ಒಟ್ಟಾಗಿ ಸರ್ಕಾರ ರಚನೆ ಮಾಡಿದರೆ ಅದು ಆರು ತಿಂಗಳಿಗಿಂತ ಹೆಚ್ಚು ಬಾಳುವುದಿಲ್ಲ ಎಂದು ದೇವೇಂದ್ರ ಫಡ್ನವಿಸ್ ಹೇಳಿಕೆಗೆ ಶಿವಸೇನೆ, ನಾವು ಸರ್ಕಾರ ರಚನೆ ಮಾಡಲು ಒಂದಾಗಿರುವುದು ಹಲವರಿಗೆ ಹೊಟ್ಟೆನೋವು ತರಿಸಿದೆ ಎಂದಿದೆ.


ತಮ್ಮ ಪಕ್ಷಕ್ಕೆ 119 ಶಾಸಕರ ಬೆಂಬಲವಿದ್ದು ತಾವು ಶೀಘ್ರದಲ್ಲಿಯೇ ಸರ್ಕಾರ ರಚನೆ ಮಾಡುತ್ತೇವೆ ಎಂದು ನಿನ್ನೆ ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದರು.


105 ಶಾಸಕರನ್ನಿಟ್ಟುಕೊಂಡು ಈ ಹಿಂದೆ ಗವರ್ನರ್ ಬಳಿ ಹೋಗಿ ಸರ್ಕಾರ ರಚನೆ ಮಾಡಲು ನಮ್ಮಲ್ಲಿ ಬಹುಮತವಿಲ್ಲ ಎಂದು ಹೇಳಿದ್ದ ಬಿಜೆಪಿ ಇಂದು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಗೆ ಹೇಳುತ್ತಿದೆ ಎಂದು ಶಿವಸೇನೆ ಪ್ರಶ್ನಿಸಿದೆ.


ಅಂದರೆ ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎಂಬ ಸತ್ಯ ಬಹಿರಂಗವಾಗಿದೆ. ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ಹೇಳಿದವರ ಬಣ್ಣ ಬಯಲಾಗಿದೆ.ಸರ್ಕಾರ ರಚಿಸಲು ಅನೈತಿಕ ಮಾರ್ಗ ಹಿಡಿಯುವುದು ರಾಜ್ಯದ ಪರಂಪರೆಗೆ ಒಳ್ಳೆಯದಲ್ಲ ಎಂದು ಸಾಮ್ನಾದಲ್ಲಿ ಹೇಳಿದೆ.

SCROLL FOR NEXT