ದೇಶ

'ಇದು ಠಾಕೂರ್, ಬ್ರಾಹ್ಮಣರ ಸ್ವತ್ತು: ದಲಿತ ಮಹಿಳೆಯರಿಗೆ ದೇವಾಲಯ ಪ್ರವೇಶ ನಿರಾಕರಣೆ 

Nagaraja AB

ಬುಲಂದ್‌ಶಹರ್:  ದಲಿತ ಮಹಿಳೆಯರಿಗೆ  ದೇವಾಲಯ ಪ್ರವೇಶ ನಿರಾಕರಿಸಿರುವ ಘಟನೆ ಉತ್ತರ ಪ್ರದೇಶದ ಬುಲೆಂದ್ ಶಹರ್ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಕ್ಟೋಬರ್ 25 ರಂದೇ ಈ ಘಟನೆ ನಡೆದಿದೆ ಆದರೆ, ಬುಧವಾರ ಈ ವಿಡಿಯೋ ವೈರಲ್ ಆಗಿದೆ.  ದೇವಾಲಯದ ಬಳಿ ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯೊಬ್ಬ ದಲಿತ ಮಹಿಳೆಯರ  ದೇವಾಲಯ ಪ್ರವೇಶಕ್ಕೆ ತಡೆಯೊಡ್ಡಿದ್ದಾನೆ. ಇದನ್ನು ಆ ಮಹಿಳೆಯರು  ಪ್ರಶ್ನಿಸಿದ್ದು, ದೇವಾಲಯಕ್ಕೆ ಏಕೆ ಬಿಡುವುದಿಲ್ಲ ಎಂದಿದ್ದಾರೆ. 

ಹೀಗೆ ಮಾತಿನ ಚಕಮಕ್ಕಿ ನಡೆದಿದ್ದು, ದೇವಾಲಯ  ಠಾಕೂರ್ ಹಾಗೂ ಬ್ರಾಹ್ಮಣರ ಸ್ವತ್ತಾಗಿದ್ದು, ಹಲವಾರು ವರ್ಷಗಳಿಂದ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ದಲಿತರನ್ನು  ದೇವಾಲಯದೊಳಗೆ ಬಿಡುವುದಿಲ್ಲ ಎಂದು ಆ ಯುವಕ ಏರಿದ ಧ್ವನಿಯಲ್ಲಿ ಹೇಳಿದ್ದಾನೆ. ನಂತರ ಮುಖ್ಯ ಗೇಟ್ ನ್ನು ಲಾಕ್ ಮಾಡಿ ಹೋಗುತ್ತಾರೆ ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. 

ನಂತರ ವಾಲ್ಮೀಕಿ ಸಮುದಾಯದ ಮುಖಂಡ ವಿಜೇಂದರ್ ಸಿಂಗ್ ಆ ಮಹಿಳೆಯರ ಪರವಾಗಿ ದೂರು ದಾಖಲಿಸಿದ್ದು, ದಲಿತರೆಂಬ ಕಾರಣಕ್ಕೆ ಮಹಿಳೆಯರಿಗೆ ಪೂಜೆ ಮಾಡಲು ಅವಕಾಶ ನೀಡಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. 

ವಿಡಿಯೋ ಆಧಾರದ ಮೇಲೆ ಪೊಲೀಸರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ  ವಿರುದ್ಧ ದೌರ್ಜನ್ಯ ಕಾಯ್ದೆ ಅನ್ವಯ ಅಪರಿಚಿತ ಇಬ್ಬರು ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಬುಲಂದ್ ಶಹರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಶ್ರೀವಾಸ್ತವ್ ತಿಳಿಸಿದ್ದಾರೆ.

SCROLL FOR NEXT