ದೇಶ

ಕಂದನ ನಿರೀಕ್ಷೆಯಲ್ಲಿರುವ ಪತ್ನಿಗೆ ಸಿಕ್ಕಿದ್ದು ಪತಿಯ ಸಾವು:ಕೋ-ಪೈಲಟ್ ಅಖಿಲೇಶ್ ಶರ್ಮ ಪತ್ನಿಗೆ ಗೊತ್ತಿಲ್ಲ ಪತಿಯ ಸಾವು! 

Sumana Upadhyaya

ಮಥುರಾ: ಕೇರಳದ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದ ನಂತರ ಗೋವಿಂದ ನಗರದ ತುಳಸೀರಾಮ ಶರ್ಮ ಕುಟುಂಬದಲ್ಲಿ ಸೂತಕದ ಛಾಯೆ. 

ತುಳಸೀರಾಮ ಶರ್ಮ ಅವರ ಪುತ್ರ 32 ವರ್ಷದ ಅಖಿಲೇಶ್ ಶರ್ಮ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಸಹ ಪೈಲಟ್ ಆಗಿದ್ದರು, ಮೊನ್ನೆ ರಾತ್ರಿ ದುರಂತದಲ್ಲಿ ದಾರುಣ ಅಂತ್ಯ ಕಂಡಿದ್ದರು. 

ನಿನ್ನೆ ಬೆಳಗ್ಗೆ ಸಂಬಂಧಿಕರೊಬ್ಬರಿಂದ ಕರೆ ಬಂದು ತಮ್ಮ ಮಗ ಮೃತಪಟ್ಟಿದ್ದಾರೆ ಎಂದು ತಿಳಿಸಿದಾಗ ಕುಟುಂಬಕ್ಕೆ ಆದ ಆಘಾತ ಅಷ್ಟಿಷ್ಟಲ್ಲ, ದಿಕ್ಕೇ ತೋಚದಂತಾಯಿತು. ವಿಮಾನ ಅಪಘಾತದಲ್ಲಿ ಮೃತಪಟ್ಟ 18 ಮಂದಿಯಲ್ಲಿ ಸಹ ಪೈಲಟ್ ಅಖಿಲೇಶ್ ಶರ್ಮ ಕೂಡ ಒಬ್ಬರು. 

190 ಜನರನ್ನು ಹೊತ್ತು ದುಬೈಯಿಂದ ಹೊರಟು ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೋಝಿಕ್ಕೋಡ್ ವಿಮಾನ ನಿಲ್ದಾಣದ ರನ್ ವೇಯಲ್ಲಿ 35 ಅಡಿ ಆಳದ ಕಂದಕಕ್ಕೆ ಬಿದ್ದು ಎರಡು ಹೋಳಾಗಿ ಹೋಯಿತು. ದುರ್ಘಟನೆಯಲ್ಲಿ ಮುಖ್ಯ ಪೈಲಟ್ ಕ್ಯಾಪ್ಟನ್ ವಸಂತ್ ಸಾಠೆ, ಸಹ ಪೈಲಟ್ ಅಖಿಲೇಶ್ ಶರ್ಮ ಸೇರಿ 18 ಮಂದಿ ಮೃತಪಟ್ಟಿದ್ದಾರೆ.

ದುರ್ಘಟನೆಯನ್ನು ಪ್ರಾಣ ಕಳೆದುಕೊಂಡವರ ಕುಟುಂಬಸ್ಥರು ಅದರ ನೋವಿನಿಂದ ಹೊರಬರಲು ಒಂದೆಡೆ ಪ್ರಯತ್ನಿಸುತ್ತಿದ್ದರೆ ಅಖಿಲೇಶ್ ಶರ್ಮ ಅವರ ಪತ್ನಿ ಮೇಘ ಇನ್ನು ಕೆಲವೇ ವಾರಗಳಲ್ಲಿ ಪುಟ್ಟ ಕಂದಮ್ಮನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ಸಮಯದಲ್ಲಿ ಅವರಿಗೆ ವಿಷಯ ತಿಳಿಸಿದರೆ ಎಲ್ಲಿ ಆಘಾತವಾಗಿ ಮುಂದೇನಾಗಬಹುದೋ ಎಂಬ ಭಯದಿಂದ ಕುಟುಂಬದವರು ಅವರಿಗೆ ಪತಿಯ ಸಾವಿನ ವಿಷಯ ಇದುವರೆಗೆ ತಿಳಿಸಿಲ್ಲವಂತೆ.

ಅಖಿಲೇಶ್ ಶರ್ಮರ ಇಡೀ ಕುಟುಂಬ ಇಷ್ಟು ದಿನಗಳಿಂದ ಮಗುವಿನ ಸ್ವಾಗತದ ಖುಷಿಯಲ್ಲಿತ್ತು. ಇಂತಹ ಘನಘೋರ ಘಟನೆ ನಡೆಯಬಹುದು ಎಂದು ಯಾರು ಕೂಡ ಅಂದುಕೊಂಡಿರಲಿಲ್ಲ ಎಂದು ಅಖಿಲೇಶ್ ಅವರ ಸೋದರ ಮಾವ ಕಮಲ್ ಶರ್ಮ ಹೇಳುತ್ತಾರೆ. 

ಅಖಿಲೇಶ್ ಮತ್ತು ಮೇಘ ಅವರಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು.ಅಖಿಲೇಶ್ ಶರ್ಮ ಚಿಕ್ಕವರಿದ್ದಾಗಲೇ ಪೈಲಟ್ ಆಗುವ ಕನಸು ಕಾಣುತ್ತಿದ್ದರಂತೆ. ನಮ್ಮ ಮಗ ನಮ್ಮ ಕಣ್ಣ ಮುಂದೆಯೇ ಈ ರೀತಿ ಪ್ರಾಣ ಕಳೆದುಕೊಳ್ಳುತ್ತಾನೆ ಎಂದು ಎಣಿಸಿರಲಿಲ್ಲ ಎಂದು ತಂದೆ ತುಳಸೀ ಶರ್ಮ ಹೇಳುತ್ತಾರೆ. 

ಪುಟ್ಟ ಮಗುವಿನ ನಿರೀಕ್ಷೆಯಲ್ಲಿರುವ ಆತನ ಪತ್ನಿ ನಮ್ ಸೊಸೆ ಮೇಘಗೆ ಸರ್ಕಾರ ಉದ್ಯೋಗ ನೀಡಬೇಕು, ಇದರಿಂದ ಭವಿಷ್ಯದಲ್ಲಿ ಆಕೆ ಉತ್ತಮ ಜೀವನ ಸಾಗಿಸಬಹುದು ಎಂದು ತಂದೆ ತುಳಸೀ ಶರ್ಮ ಕೇಳಿಕೊಂಡಿದ್ದಾರೆ. 

ವಿಮಾನಯಾನ ಎಂಜಿನಿಯರಿಂಗ್ ಪದವೀಧರರಾಗಿದ್ದ ಅಖಿಲೇಶ್ ಶರ್ಮ ಡಿಸೆಂಬರ್ 2017ರಲ್ಲಿ ಏರ್ ಇಂಡಿಯಾದಲ್ಲಿ ಸೇವೆಗೆ ಸೇರಿದ್ದರು. 

SCROLL FOR NEXT