ದೇಶ

ಶಹೀನಾಬಾಗ್ ಬಳಿಕ ಜಫರಾಬಾದ್ ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ: ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ

Manjula VN

ನವದೆಹಲಿ: ಶಹೀನಾಬಾಗ್ ಬಳಿಕ ಜಫರಾಬಾದ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಭುಗಿಲೆದಿದ್ದು, ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಣಾಮ ದೆಹಲಿಯ ಪ್ರಮುಖ ರಸ್ತೆಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ತಿಳಿದುಬಂದಿದೆ. 

ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯ ಜಫರಾಬಾದ್ ಮೆಟ್ರೋ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಮಾಡದೆ ಸಂಚಾರ ಮುಂದುವರೆಸಿವೆ. ಈ ಸಂಬಂಧ ದೆಹಲಿ ಮೆಟ್ರೋ ರೈಲು ನಿಗಮ ಟ್ವೀಟ್ ಮಾಡಿದ್ದು, ಈ ನಿಲ್ದಾಣದಲ್ಲಿ ಒಳ ಹಾಗೂ ಹೊರ ಹೋಗುವ ಬಾಗಿಲುಗಳನ್ನು ಬಂದ್ ಮಾಡಿದ್ದು, ಇಲ್ಲಿ ರೈಲುಗಳು ನಿಲುಗಡೆಯಾಗುವುದಿಲ್ಲ ಎಂದು ತಿಳಿಸಿದೆ. 

ಈಶಾನ್ಯ ದೆಹಲಿಯ ಜಫರಾಬಾದ್ ಮೆಟ್ರೋ  ನಿಲ್ದಾಣದ ಸಮೀಪವೇ ನೂರಾರು ಮಹಿಳೆಯರು ಪ್ರತಿಭಟನೆ ಆರಂಭಿಸಿದ್ದಾರೆ. ದೆಹಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದ್ದಾರೆ. ಶನಿವಾರ ರಾತ್ರಿಯಿಂದಲೇ ಜಫರಾಬಾದ್ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿರುವ ಮಹಿಳೆಯರು ಭಾನುವಾರ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. 

ಈಗಾಗಲೇ ಪ್ರತಿಭಟನಾನಿರತ ಮಹಿಳೆಯರು ಜಫರಾಬಾದ್ ರಸ್ತೆ ನಂ.66 ಬಂದ್ ಮಾಡಿದ್ದು, ಇದರಿಂದಾಗಿ ಸೀಲಾಂಪುರ್ದಿಂದ ಮಾಜ್ಪುರ್ ಹಾಗೂ ಯಮುನಾ ವಿಹಾರ್ ಸಂಪರ್ಕ ಕಡಿತಗೊಂಡಿದೆ. ಪ್ರತಿಭಟನಾಕಾರರ ಮತ್ತೊಂದು ತಂಡ ಸೀಲಾಂಪುರ್ ರಸ್ತೆ, ಕರ್ದಾಂಪುರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದು, ಈ ಭಾಗದ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಏರ್ಪಟ್ಟಿದೆ ಎಂದು ವರದಿಗಳು ತಿಳಿಸಿವೆ. 

SCROLL FOR NEXT