ದೇಶ

ಪ್ರಧಾನಿ ಮೋದಿ, ಅಮಿತ್ ಶಾ ಹತ್ಯೆಗೆ ಕರೆ, ತಮಿಳು ವಿದ್ವಾಂಸ ನೆಲ್ಲೈ ಕಣ್ಣನ್​ ಬಂಧನ

Srinivasamurthy VN

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ಅವರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದ ತಮಿಳು ವಿದ್ವಾಂಸ ನೆಲ್ಲೈ ಕಣ್ಣನ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೋಷಿಯಲ್​ ಡೆಮಾಕ್ರಟಿಕ್​ ಪಾರ್ಟಿ ಆಫ್​ ಇಂಡಿಯಾ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತ ಕಣ್ಣನ್​, ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಬಹಿರಂಗವಾಗಿ ಕರೆ ನೀಡಿದ್ದರು. ಅಮಿತ್​ ಷಾ ಅವರು ಪ್ರಧಾನಿ ಮೋದಿಯವರ ಮಿದುಳು ಇದ್ದಂತೆ. ಅಮಿತ್​ ಷಾ ಕರೆ ಮುಗಿದರೆ ಮೋದಿಯವರ ಕತೆ ಮುಗಿದಂತೆ. ಅಷ್ಟಾದರೂ ಕೂಡ ಯಾವ ಮುಸ್ಲಿಮರೂ ಇನ್ನು ಅವರಿಬ್ಬರನ್ನು ಹತ್ಯೆ ಮಾಡಲು ಮುಂದಾಗುತ್ತಿಲ್ಲ. ಇದು ನನಗೆ ಅಚ್ಚರಿ ತಂದಿದೆ ಎಂದು ಹೇಳುವ ವಿವಾದ ಸೃಷ್ಟಿಸಿದ್ದರು.

ನೆಲ್ಲೈ ಕಣ್ಣನ್​ ಅವರ ಮಾತುಗಳು ಹಿಂಸೆಯನ್ನು ಪ್ರಚೋದಿಸುವಂತಿದೆ ಎಂದು ಪ್ರತಿಪಾದಿಸಿ ಒಟ್ಟು 15 ದೂರುಗಳು ದಾಖಲಾಗಿದ್ದವು. ಪೊಲೀಸರು ಪ್ರತ್ಯೇಕ ಎಫ್​ಐಆರ್​ ಕೂಡ ದಾಖಲಿಸಿದ್ದರು. ಬಿಜೆಪಿ ಹಿರಿಯ ನಾಯಕರಾದ ಪಾನ್​ ರಾಧಾಕೃಷ್ಣನ್​, ಸಿ.ಪಿ.ರಾಧಾಕೃಷ್ಣನ್​, ಎಲ್​. ಗಣೇಶನ್​ ಹಾಗೂ ಎಚ್. ರಾಜಾ ಅವರು ಮರೀನಾ ಬೀಚ್​ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಮಾಡುವ ಮೂಲಕ ನೆಲ್ಲೈ ಕಣ್ಣನ್​ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದರು.

ಪ್ರಧಾನಿ ಹಾಗೂ ಗೃಹಸಚಿವರ ಹತ್ಯೆಗೆ ಕರೆ ನೀಡಿದ ಆರೋಪ ಮಾಡಿ ಬಿಜೆಪಿ ಮುಖಂಡರೋರ್ವರು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಪೆರಂಬಲೂರ್​ನಲ್ಲಿ ಕಣ್ಣನ್ ಅವರನ್ನು ಬಂಧಿಸಿದ್ದಾರೆ. ನೆಲ್ಲೈ ಕಣ್ಣನ್​ ಬಂಧನವಾಗುತ್ತಿದ್ದಂತೆ ಬಿಜೆಪಿ ನಾಯಕ ಎಚ್​.ರಾಜಾ ಅವರು ಟ್ವೀಟ್ ಮಾಡಿ, ನೆಲ್ಲೈ ವಿರುದ್ಧ ದೂರು ದಾಖಲಿಸಿದ, ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲ ಬಿಜೆಪಿ ಕಾರ್ಯಕರ್ತರು, ನಾಯಕರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. 

SCROLL FOR NEXT