ದೇಶ

ವಿಧವೆ ಎನಿಸಿಕೊಳ್ಳಲು ಇಷ್ಟವಿಲ್ಲ, ವಿಚ್ಛೇದನ ನೀಡಿ.. ಆ ಮೇಲೆ ಗಲ್ಲಿಗೇರಿಸಿ: ಕೋರ್ಟ್ ಗೆ ನಿರ್ಭಯಾ ದೋಷಿ ಅಕ್ಷಯ್ ಪತ್ನಿ ಮನವಿ

Srinivasamurthy VN

ನವದೆಹಲಿ: 2012 ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ದಿನಕ್ಕೊಂದು ತಂತ್ರ ಹೂಡುತ್ತಿರುವ ಬೆನ್ನಲ್ಲೇ ಇತ್ತ ಪ್ರಕರಣದ ಅಪರಾಧಿ ಅಕ್ಷಯ್ ಠಾಕೂರ್ ಪತ್ನಿ ವಿಚ್ಛೇಧನ ನೀಡದ ಹೊರತು ಗಲ್ಲು ಶಿಕ್ಷೆ ಜಾರಿ ಮಾಡಬಾರದು ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ನಿರ್ಭಯಾ ಪ್ರಕರಣದ ಅಪರಾಧಿಗಳು ಕೃತ್ಯ ಎಸಗಿ 2012ರ ಡಿಸೆಂಬರ್ 16ರಿಂದ ಇಂದಿನವರೆಗೆ ಅಂದ್ರೆ 7 ವರ್ಷ 3 ತಿಂಗಳು, 3 ದಿನಗಳು ಕಳೆದಿವೆ. ಮುಖೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್ ಠಾಕೂರ್ ಈವರೆಗೂ ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ ನಾಳೆ ಬೆಳಗ್ಗೆ ನಾಲ್ವರನ್ನೂ ಗಲ್ಲಿಗೆ ಏರಿಸುವುದು ಖಚಿತವಾಗಿದೆ.  ನಾಲ್ಕನೇ ಬಾರಿ ಸಾವಿನ ಬಾಗಿಲಲ್ಲಿ ನಿಂತಿರುವ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳು ನೇಣಿಗೆ ಕೊರೊಳುಡ್ಡುವ ಕಡೆಯ ಕ್ಷಣದವರೆಗೂ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. 

ಏತನ್ಮಧ್ಯೆ ಅಕ್ಷಯ್ ಪತ್ನಿ ಪುನಿತಾ ವಿಚ್ಛೇದನ ಕೋರಿ ಬಿಹಾರದ ಔರಂಗಾಬಾದ್ ಜಿಲ್ಲೆಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಳು. ನಾನು ವಿಧವೆಯಾಗಿ ಬದುಕಲು ಬಯಸುವುದಿಲ್ಲ. ಆದ್ದರಿಂದ ನೇಣು ಹಾಕುವ ಮೊದಲು ನಾವು ಕಾನೂನುಬದ್ಧವಾಗಿ ವಿಚ್ಛೇದನ ಪಡೆಯುತ್ತೇನೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾಳೆ. ಈ ಅರ್ಜಿಯ ವಿಚಾರಣೆ ಸಹ ನಡೆಯಬೇಕಿದೆ. 

ಗಲ್ಲು ಶಿಕ್ಷೆ ಮೇಲೆ ವಿಚ್ಛೇದನ ಅರ್ಜಿ ಪರಿಣಾಮ ಬೀರದು
ಇನ್ನು ಅಕ್ಷಯ್ ಪತ್ನಿ ಪುನೀತಾ ಸಲ್ಲಿಕೆ ಮಾಡಿರುವ ವಿಚ್ಛೇದನ ಅರ್ಜಿಯಿಂದ ಗಲ್ಲು ಶಿಕ್ಷೆ ಜಾರಿ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಚ್ಛೇದನವು ಸಿವಿಲ್ ಪ್ರಕರಣಗಳಲ್ಲಿ ಬರುತ್ತದೆ. ಹೀಗಾಗಿ ಆ ಅರ್ಜಿ ಕ್ರಿಮಿನಲ್ ಪ್ರಕರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಕಾರಣಕ್ಕಾಗಿ ಮಾರ್ಚ್ 20ರಂದು ಬೆಳಗ್ಗೆ 5:30ಕ್ಕೆ ಅಪರಾಧಿಗಳನ್ನು ಗಲ್ಲಿಗೇರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

SCROLL FOR NEXT