ದೇಶ

ಶೇ.10ಕ್ಕಿಂತ ಹೆಚ್ಚು ಕೊರೋನಾ ಪಾಸಿಟಿವಿಟಿ ಪ್ರಮಾಣ ಹೊಂದಿರುವ ಜಿಲ್ಲೆಗಳಲ್ಲಿ ಕಡ್ಡಾಯ ಲಾಕ್ ಡೌನ್ ಮಾಡಬೇಕು: ಐಸಿಎಂಆರ್

Srinivasamurthy VN

ನವದೆಹಲಿ: ಶೇ.10ಕ್ಕಿಂತ ಹೆಚ್ಚು ಕೋವಿಡ್-19 ಸೋಂಕು ಸಕಾರಾತ್ಮಕ ದರ ಹೊಂದಿರುವ ನಗರಗಳಲ್ಲಿ ಕಡ್ಡಾಯ ಲಾಕ್ ಡೌನ್ ಮಾಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ದೇಶದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ದಾಖಲೆಯ ಸಂಖ್ಯೆಯಲ್ಲಿ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಈಗಾಗಲೇ ಸಾಕಷ್ಟು ರಾಜ್ಯಗಳು ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಮೊರೆ ಹೋಗುತ್ತಿದ್ದು, ಇದೇ ವಿಚಾರವಾಗಿ ಮಾತನಾಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮುಖ್ಯಸ್ಥ ಬಲರಾಮ್ ಭಾರ್ಗವ್ ಅವರು, ಒಟ್ಟಾರೆ ಕೋವಿಡ್ ಪರೀಕ್ಷೆಗಳ ಪೈಕಿ ಶೇ.10ಕ್ಕಿಂತ ಹೆಚ್ಚು ಸೋಂಕು ಸಕಾರಾತ್ಮಕ ದರ ಹೊಂದಿರುವ ಎಲ್ಲಾ ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳು ಜಾರಿಯಲ್ಲಿರಬೇಕು ಹೇಳಿದ್ದಾರೆ.

'ಶೇ.10ಕ್ಕಿಂತ ಹೆಚ್ಚು ಸೋಂಕು ಸಕಾರಾತ್ಮಕ ದರ ಹೊಂದಿರುವ ಜಿಲ್ಲೆಗಳು ಕಡ್ಡಾಯವಾಗಿ ಲಾಕ್ ಡೌನ್ ನಿರ್ಬಂಧಗಳಡಿಯಲ್ಲಿ ಬರಬೇಕು. ಯಾವ ಜಿಲ್ಲೆಗಳಲ್ಲಿ ಸೋಂಕು ಸಕಾರಾತ್ಮಕ ದರವ ಶೇ.10 ರಿಂದ ಶೇ.5 ಅಥವಾ ಅದಕ್ಕಿಂತ ಕಡಿಮೆಗೆ ಇಳಿಕೆಯಾಗುತ್ತದೆಯೋ ಆ ಜಿಲ್ಲೆಗಲ್ಲಿ ಮಾತ್ರ ಲಾಕ್ ಡೌನ್ ನಿರ್ಬಂಧಗಳನ್ನು ತೆಗೆಯಬಹುದು. ಆದರೆ ಇದು ಕನಿಷ್ಠ 6 ರಿಂದ 8 ವಾರಗಳಲ್ಲಿ ಸಾಧ್ಯವಿಲ್ಲ. ನಮ್ಮ ಏಕೈಕ ಅಸಮಾಧನವೆಂದರೆ ಶೇ.10%ರಷ್ಟು ಸೋಂಕು ಸಕಾರಾತ್ಮಕ ಜಿಲ್ಲೆಗಳಲ್ಲಿ ಲಾಕ್ ಡೌನ್ ನಿರ್ಬಂಧ ಹೇರಬೇಕು ಎಂಬ ತಮ್ಮ ಶಿಫಾರಸ್ಸು ಜಾರಿಯಲ್ಲಿ ಕೊಂಚ ವಿಳಂಬವಾಗಿದೆ. ಈಗ ಸಾಕಷ್ಟು ರಾಜ್ಯ  ಸರ್ಕಾರಗಳು ಸೋಂಕು ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಜಾರಿ ಮಾಡುತ್ತಿವೆ. ಕಳೆದ ಕೆಲವು ವಾರಗಳಿಂದ ದೇಶದ ಬಹುಪಾಲು ರಾಜ್ಯಗಳು ಲಾಕ್ ಡೌನ್ ಜಾರಿ ಮಾಡಿವೆ ಎಂದು ಹೇಳಿದ್ದಾರೆ. 

SCROLL FOR NEXT