ದೇಶ

ಶೀಘ್ರದಲ್ಲಿಯೇ ಮುಂದಿನ ಸುತ್ತಿನ ಮಿಲಿಟರಿ ಮಾತುಕತೆಗೆ ಭಾರತ- ಚೀನಾ ಒಪ್ಪಿಗೆ

Nagaraja AB

ನವದೆಹಲಿ: ಪೂರ್ವ ಲಡಾಖ್ ನ ವಾಸ್ತವ ಗಡಿ ನಿಯಂತ್ರಣ ರೇಖೆಯ ಘರ್ಷಣೆಯ ಕೇಂದ್ರಬಿಂದು ಪ್ರದೇಶದಿಂದ  ಸಂಪೂರ್ಣವಾಗಿ ಸೇನೆ ಹಿಂತೆಗೆತ ಉದ್ದೇಶದ ಸಾಧನೆಗೆ ಶೀಘ್ರದಲ್ಲಿಯೇ 14ನೇ ಸುತ್ತಿನ ಮಾತುಕತೆ ನಡೆಸಲು ಭಾರತ ಮತ್ತು ಚೀನಾ ಗುರುವಾರ ಒಪ್ಪಿಕೊಂಡಿವೆ.

ಗಡಿ ವ್ಯವಹಾರಗಳ ಕುರಿತ ಸಮಾಲೋಚನೆ ಮತ್ತು ಸಮನ್ವಯತೆಗಾಗಿ ಕೆಲಸದ ಕಾರ್ಯವಿಧಾನ (ಡಬ್ಲ್ಯೂಎಂಸಿಸಿ) ವರ್ಚುಯಲ್ ಸಭೆಯಲ್ಲಿ ಉಭಯ ಕಡೆಗಳಲ್ಲಿ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಾಗಿದ್ದು,  ಅಕ್ಟೋಬರ್ 10 ರಂದು ನಡೆದಿದ್ದ ಕಳೆದ ಬಾರಿಯ ಮಿಲಿಟರಿ ಮಾತುಕತೆಯಿಂದ ಈವರೆಗೂ ಆಗಿರುವ ಅಭಿವೃದ್ಧಿಗಳ ಪರಾಮರ್ಶೆ ನಡೆಸಲಾಗಿದೆ. 

ಮುಂದಿನ ಸುತ್ತಿನ ಮಿಲಿಟರಿ ಮಾತುಕತೆಗೆ ಒಪ್ಪಿಗೆ ಬಿಟ್ಟರೆ ಬೇರೆ ಯಾವುದೇ ರೀತಿಯ ಮಹತ್ವದ ರೀತಿಯ ಸಂದೇಶ ಸಭೆಯಿಂದ ಹೊರಬಿದ್ದಿಲ್ಲ. ದ್ವಿಪಕ್ಷೀಯ ಒಪ್ಪಂದಗಳಿಗೆ ಸಂಪೂರ್ಣವಾಗಿ ಬದ್ಧರಾಗಿರುವಂತೆಯೇ, ಉಳಿದಿರುವ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಪರಿಹರಿಸಲು ಅಗತ್ಯವಾದ ಪರಿಹಾರ ಕಂಡುಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿರುವುದಾಗಿ ಎಂಇಎ ಹೇಳಿದೆ.

ಮುಂದೆ ಯಾವುದೇ ರೀತಿಯ ಅಹಿತರ ಘಟನೆ ನಡೆಯದಂತೆ ಸುರಕ್ಷಿತ ಪರಿಸ್ಥಿತಿ ಖಾತ್ರಿಗೆ ಉಭಯ ದೇಶಗಳು ಒಪ್ಪಿಕೊಂಡಿವೆ. ದ್ವೀಪಕ್ಷೀಯ ಒಪ್ಪಂದದಂತೆ ಪೂರ್ವ ಲಡಾಖ್ ನ ವಾಸ್ತವ ಗಡಿ ನಿಯಂತ್ರಣ ರೇಖೆಯ ಸಂಘರ್ಷದ ಎಲ್ಲಾ ಪ್ರದೇಶಗಳಿಂದ ಸಂಪೂರ್ಣವಾಗಿ ಸೇನೆ ಹಿಂತೆಗೆತ ಗುರಿ ಸಾಧನೆಗೆ ಮುಂದಿನ ಸುತ್ತಿನ (14) ಹಿರಿಯ ಕಮಾಂಡರ್ಸ್ ಸಭೆಗೆ ಶೀಘ್ರವೇ ದಿನಾಂಕ ನಿಗದಿಗೆ ಸಭೆಯಲ್ಲಿ ಉಭಯ ಕಡೆಗಳಿಂದ ಒಪ್ಪಿಕೊಂಡಿರುವುದಾಗಿ ಎಂಇಎ ತಿಳಿಸಿದೆ. 

ಕಳೆದ ವರ್ಷದ ಜೂನ್ ತಿಂಗಳಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದಿದ್ದ ಮಾರಕ ಘರ್ಷಣೆಯ ನಂತರ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಸರಣಿ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಯ ಫಲವಾಗಿ ಪಾಂಗಾಂಗ್ ಸರೋವರದ ದಕ್ಷಿಣ ಮತ್ತು ಉತ್ತರ ದಂಡೆ ಹಾಗೂ ಗೋಗ್ರಾ ಪ್ರದೇಶದಿಂದ ಸಂಪೂರ್ಣವಾಗಿ ಸೇನೆ ಹಿಂತೆಗೆತ ಪ್ರಕ್ರಿಯೆಯನ್ನು ಉಭಯ ದೇಶಗಳು ಪೂರ್ಣಗೊಳಿಸಿವೆ. ಆದಾಗ್ಯೂ. ಪ್ರಸ್ತುತ ಉಭಯ ದೇಶಗಳ ಸುಮಾರು 50 ಸಾವಿರದಿಂದ 60 ಸಾವಿರ ಪಡೆಗಳು ಎಲ್ ಎಸಿಯ ಸೂಕ್ಷ್ಮ ವಲಯದಲ್ಲಿವೆ.

SCROLL FOR NEXT