ದೇಶ

ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ಲೋಕಸಭೆಯಲ್ಲಿ ಕೃಷಿ ಕಾಯ್ದೆ ರದ್ದತಿ ಮಸೂದೆ ಅಂಗೀಕಾರ

Srinivas Rao BV

ನವದೆಹಲಿ: ಮುಂದೂಡಲ್ಪಟ್ಟಿದ್ದ ಲೋಕಸಭಾ ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ರದ್ದತಿ-2021 ರ ಮಸೂದೆಯನ್ನು ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ಅಂಗೀಕರಿಸಿದೆ. 

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸೋಮವಾರ ಮಧ್ಯಾಹ್ನ ರದ್ದತಿ ಮಸೂದೆಗೆ ಪ್ರಸ್ತಾವನೆ ಸಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಮಸೂದೆಯನ್ನು ಹಿಂಪಡೆಯಲಾಯಿತು. 

ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಮಸೂದೆಗೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದಿದ್ದರು. ರಾಜ್ಯಸಭೆಯಲ್ಲಿ ರದ್ದತಿ ಮಸೂದೆ ಮಧ್ಯಾಹ್ನ 2:00 ಗಂಟೆಗೆ ಮಂಡಾನೆಯಾಗಲಿದ್ದು, ಇಂದೇ ಅಂಗೀಕಾರಗೊಳ್ಳುವ ಸಾಧ್ಯತೆಯೂ ಇದೆ. 

ಸಂಸತ್ ಅಧಿವೇಶನ ಪ್ರಾರಂಭವಾಗುವುದಕ್ಕೂ ಮುನ್ನ ಮಾತನಾಡಿದ್ದ ಪ್ರಧಾನಿ ಮೋದಿ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆಯೂ ಚರ್ಚೆಗೆ ಸರ್ಕಾರ ಸಿದ್ಧವಿದೆ. ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದರು. 

ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆಯೇ ಲೋಕಸಭೆಯ ಕಲಾಪವನ್ನು ಎರಡನೇ ಬಾರಿಗೆ ಮಧ್ಯಾಹ್ನ 2:00 ಗಂಟೆಗೆ ಮುಂದೂಡಲಾಗಿದೆ. ಪ್ರತಿಪಕ್ಷಗಳ ಗದ್ದಲ, ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಷ್ಟೇ ಪ್ರತಿಪಕ್ಷಗಳ ಪ್ರಮುಖ ಬೇಡಿಕೆಯಾಗಿತ್ತು. ಈಗ ಹಿಂಪಡೆಯಲಾಗಿದ್ದರೂ ಗದ್ದಲ ನಡೆಸುವುದೇಕೆ? ಎಂದು ಪ್ರಶ್ನಿಸಿದ್ದಾರೆ. 

SCROLL FOR NEXT