ದೇಶ

ರಾಜ್ಯಸಭೆ ಚುನಾವಣೆ: ಕೇಂದ್ರ ಸಚಿವ ಎಲ್. ಮುರುಗನ್ ಮಧ್ಯಪ್ರದೇಶದಿಂದ ಕಣಕ್ಕೆ

Lingaraj Badiger

ಚೆನ್ನೈ: ಮಧ್ಯಪ್ರದೇಶದಿಂದ ರಾಜ್ಯಸಭೆಗೆ ನಡೆಯಲಿರುವ ಉಪ ಚುನಾವಣೆಗೆ ಬಿಜೆಪಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಶನಿವಾರ ಘೋಷಿಸಿದೆ.

ಮುರುಗನ್ ಅವರು ಜುಲೈ 7 ರಂದು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸಂಸದರಲ್ಲದ ಅವರು ಮುಂದಿನ ಆರು ತಿಂಗಳೊಳಗೆ ಲೋಕಸಭೆ ಅಥವಾ ರಾಜ್ಯಸಭೆಗೆ ಆಯ್ಕೆಯಾಗಬೇಕಾಗಿತ್ತು. ಹೀಗಾಗಿ ರಾಜ್ಯಸಭೆ ಉಪ ಚುನಾವಣೆಗೆ ಮಧ್ಯಪ್ರದೇಶದಿಂದ ಕಣಕ್ಕಿಳಿದಿದ್ದಾರೆ. 

ತಮ್ಮನ್ನು ಅಭ್ಯರ್ಥಿಯಾಗಿ ಘೋಷಿಸಿದ ಬಿಜೆಪಿ ನಾಯಕರಿಗೆ ಧನ್ಯವಾದ ಅರ್ಪಿಸಿದ ಮುರುಗನ್, "ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮಧ್ಯ ಪ್ರದೇಶ ಬಿಜೆಪಿ ಅಧ್ಯಕ್ಷ ವಿಡಿ ಶರ್ಮಾ ಮತ್ತು ಪಕ್ಷದ ಕಾರ್ಯಕರ್ತರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ಈ ಹಿಂದೆ ಮುರುಗನ್ ಅವರು ಪುದುಚೇರಿಯಿಂದ ಚುನಾಯಿತರಾಗಬಹುದು ಎಂಬ ಮಾತುಗಳು ಕೇಳಿಬಂದಿತ್ತು.

ಮಧ್ಯಪ್ರದೇಶದಲ್ಲಿ ತಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ರಾಜ್ಯಪಾಲರಾಗಿ ನೇಮಗೊಂಡ ನಂತರ, ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಈಗ ಉಪ ಚುನಾವಣೆ ನಡೆಯುತ್ತಿದೆ.

SCROLL FOR NEXT