ದೇಶ

ಕೇರಳ ಹಾಗೂ ದೆಹಲಿಯಲ್ಲಿ ಮತ್ತೊಂದು ಮಂಕಿಪಾಕ್ಸ್ ಪಾಸಿಟಿವ್ ಕೇಸ್ ಪತ್ತೆ: ದೇಶದಲ್ಲಿ ಪ್ರಕರಣಗಳ ಸಂಖ್ಯೆ 8ಕ್ಕೆ ಏರಿಕೆ!

Vishwanath S

ತಿರುವನಂತಪುರ/ದೆಹಲಿ: ದೇಶದಲ್ಲಿ ದಿನೇ ದಿನೇ ಮಂಕಿಪಾಕ್ಸ್ ಪ್ರಕರಣ ಹೆಚ್ಚುತ್ತಿದ್ದು, ಕೇರಳದಲ್ಲಿ ಹಾಗೂ ದೆಹಲಿಯಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಪ್ರಕರಣಗಳ ಸಂಖ್ಯೆ 8ಕ್ಕೇರಿದೆ.

ಕೇರಳಕ್ಕೆ ಯುಎಇಯಿಂದ ಹಿಂದಿರುಗಿದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 5ಕ್ಕೆ ಏರಿದೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ರಾಜ್ಯದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣದ ಸುದ್ದಿಯನ್ನು ಖಚಿತಪಡಿಸಿದ್ದಾರೆ. 30 ವರ್ಷದ ರೋಗಿಯು ಪ್ರಸ್ತುತ ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಯುಎಇಯಿಂದ ಜುಲೈ 27ರಂದು ಕೋಝಿಕೋಡ್ ವಿಮಾನ ನಿಲ್ದಾಣ ತಲುಪಿದ ಅವರು ಮಲಪ್ಪುರಂನ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸಚಿವರು ತಿಳಿಸಿದ್ದಾರೆ.

ಮಂಕಿಪಾಕ್ಸ್ ತರಹದ ರೋಗಲಕ್ಷಣಗಳನ್ನು ಹೊಂದಿದ್ದ ಒಬ್ಬ ವ್ಯಕ್ತಿಯ ಸಾವಿನ ನಂತರ ರಾಜ್ಯದ ತ್ರಿಶೂರ್ ಜಿಲ್ಲೆಯಲ್ಲಿ ಇಪ್ಪತ್ತು ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಇನ್ನು ದೆಹಲಿಯ ಲೋಕನಾಯಕ್ ಆಸ್ಪತ್ರೆಗೆ ದಾಖಲಾದ 31 ವರ್ಷದ ನೈಜೀರಿಯಾದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಪತ್ತೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು ಮಂಕಿಪಾಕ್ಸ್ ದೃಢಪಟ್ಟಿದೆ. ಇದರೊಂದಿಗೆ ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ 3ಕ್ಕೇರಿದೆ.

SCROLL FOR NEXT