ದೇಶ

ಕಲಾಪಕ್ಕೆ ಅಡ್ಡಿ: ಎಎಪಿಯ ಇಬ್ಬರು ಸೇರಿ ಮೂವರು ಸದಸ್ಯರು ರಾಜ್ಯಸಭೆಯಿಂದ ಅಮಾನತು

Ramyashree GN

ನವದೆಹಲಿ: ಸದನದಲ್ಲಿ 'ಅಶಿಸ್ತಿನ ವರ್ತನೆ' ತೋರಿದ್ದಕ್ಕಾಗಿ ಪಕ್ಷೇತರ ಸಂಸದ ಅಜಿತ್‌ ಕುಮಾರ್‌ ಭುಯಾನ್‌ ಸೇರಿದಂತೆ ಆಮ್ ಆದ್ಮಿ ಪಕ್ಷದ ಸುಶೀಲ್‌ ಕುಮಾರ್‌ ಗುಪ್ತಾ ಹಾಗೂ ಸಂದೀಪ್‌ ಕುಮಾರ್‌ ಪಾಠಕ್‌ ಅವರನ್ನು ಈ ವಾರದ ಕಲಾಪದ ಉಳಿದಿರುವ ಅವಧಿಗೆ ಅಮಾನತುಗೊಳಿಸುವ ಪ್ರಸ್ತಾವನೆಯನ್ನು ರಾಜ್ಯಸಭೆ ಗುರುವಾರ ಅಂಗೀಕರಿಸಿದೆ.

ತೀವ್ರ ಗದ್ದಲದ ನಡುವೆ ಮೊದಲ ಬಾರಿಗೆ ಸದನವನ್ನು ಮುಂದೂಡಿದ ನಂತರವೂ, ಪ್ರತಿಪಕ್ಷ ಸದಸ್ಯರು ಸದನದ ಬಾವಿಯಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.

ಫಲಕಗಳನ್ನು ಹಿಡಿದುಕೊಂಡು ಸದನದ ಬಾವಿಯಲ್ಲಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ಅವರು ಮೂವರು ಸದಸ್ಯರನ್ನು ಹೆಸರಿಸಿದರು.

ಬಳಿಕ, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಅವರು, ಕಲಾಪದ ಉಳಿದ ಅವಧಿಗೆ ಮೂವರು ಸದಸ್ಯರನ್ನು ಸದನದಿಂದ ಅಮಾನತುಗೊಳಿಸುವ ಪ್ರಸ್ತಾಪವನ್ನು ಮಂಡಿಸಿದರು.

ಧ್ವನಿ ಮತದ ಮೂಲಕ ಈ ಅಮಾನತು ಪ್ರಸ್ತಾವವನ್ನು ಅಂಗೀಕರಿಸಲಾಯಿತು. ಕೆಲವು ವಿರೋಧ ಪಕ್ಷದ ಸದಸ್ಯರು ಮತ ವಿಭಜನೆಗೆ ಒತ್ತಾಯಿಸಿದರು. ಹರಿವಂಶ್ ಅವರು ಮತ ವಿಭಜನೆಗೆ ಅವಕಾಶ ನೀಡಲು ಸದಸ್ಯರು ತಮ್ಮ ತಮ್ಮ ಸ್ಥಾನಗಳಿಗೆ ತೆರಳಲು ಸೂಚಿಸಿದರು. ಆದರೆ, ಪ್ರತಿಪಕ್ಷದ ಸದಸ್ಯರು ಗದ್ದಲ ಮುಂದುವರಿಸಿದರು. ನಂತರ ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆಯೇ ಅವರು ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

‘ಅಶಿಸ್ತಿನ ನಡವಳಿಕೆಗಾಗಿ’ಗಾಗಿ ಇದುವರೆಗೆ 23 ವಿರೋಧ ಪಕ್ಷದ ಸದಸ್ಯರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.

SCROLL FOR NEXT