ದೇಶ

ಇಲ್ಲಿ ಪ್ರತಿಯೊಬ್ಬ ಭಾರತೀಯನೂ ಸುರಕ್ಷಿತ ಎಂಬ ಭಾವನೆ ಮೂಡಿಸಬೇಕು: ಧಾರ್ಮಿಕ ದ್ವೇಷದ ಬಗ್ಗೆ ಅಜಿತ್ ದೋವಲ್

Lingaraj Badiger

ನವದೆಹಲಿ: ಕೆಲವರು ಧರ್ಮ ಮತ್ತು ಸಿದ್ಧಾಂತದ ಹೆಸರಿನಲ್ಲಿ ಕೋಮು ಸಾಮರಸ್ಯ ಕದಡಲು ಪ್ರಯತ್ನಸುತ್ತಿದ್ದಾರೆ. ಇದು ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಇದನ್ನು ಎದುರಿಸಲು ಎಲ್ಲರೂ, ವಿಶೇಷವಾಗಿ ಧಾರ್ಮಿಕ ಮುಖಂಡರು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‌ಎಸ್‌ಎ) ಅಜಿತ್ ದೋವಲ್ ಅವರು ಶನಿವಾರ ಹೇಳಿದ್ದಾರೆ.

ಇಂದು ಅಖಿಲ ಭಾರತ ಸೂಫಿ ಸಜ್ಜದನಾಶಿನ್ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅಜಿತ್ ದೋವಲ್ ಅವರು,  ಕೆಲವು ಶಕ್ತಿಗಳು ಅಹಿತಕರ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಇದು ಭಾರತದ ಪ್ರಗತಿಗೆ ಅಡ್ಡಿಯಾಗುತ್ತಿದೆ. ಧರ್ಮ ಮತ್ತು ಸಿದ್ಧಾಂತದ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸುತ್ತಿದ್ದಾರೆ. ಇಡೀ ದೇಶವಲ್ಲದೆ, ವಿದೇಶಗಳಲ್ಲೂ ಇದರ ಪರಿಣಾಮ ಕಂಡು ಬರುತ್ತಿದೆ ಎಂದರು.

ತಪ್ಪು ತಿಳುವಳಿಕೆಯನ್ನು ನಿವಾರಿಸಲು ಮತ್ತು ದೇಶದ ಎಲ್ಲಾ ಧಾರ್ಮಿಕ ಸಂಸ್ಥೆಗಳು ಭಾರತದ ಅವಿಭಾಜ್ಯ ಅಂಗವೆಂದು ಭಾವಿಸುವ ಅಗತ್ಯವಿದೆ ಎಂದು ದೋವಲ್ ಹೇಳಿದರು.

"ಇಲ್ಲಿ ಪ್ರತಿಯೊಬ್ಬ ಭಾರತೀಯನೂ ಸುರಕ್ಷಿತ ಎಂಬ ಭಾವನೆ ಮೂಡಿಸಬೇಕು. ನಮ್ಮ ದೇಶ ಇಂದು ಪ್ರಗತಿಯತ್ತ ಸಾಗುತ್ತಿದೆ. ಪಟ್ಟಭದ್ರ ಹಿತಾಸಕ್ತಿಯ ಕೆಲವು ಜನರು ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ನಾವೆಲ್ಲರೂ ಸೌಹಾರ್ದತೆ ಮತ್ತು ಶಾಂತಿಗಾಗಿ ಜತೆಯಾಗಿ ಕೆಲಸ ಮಾಡಬೇಕು ಹಾಗೂ ನಮ್ಮ ದೇಶವನ್ನು ಒಗ್ಗಟ್ಟಿನಿಂದ ಇರಿಸುವಂತಹ ಸಾಮಾನ್ಯ ಭಾವನೆಯನ್ನು ಹೊಂದಿರಬೇಕು" ಎಂದು ದೋವಲ್ ಹೇಳಿದ್ದಾರೆ.

ಧಾರ್ಮಿಕ ಮುಖಂಡರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಶಾಂತಿ ಮತ್ತು ಏಕತೆ ಕುರಿತು ಚರ್ಚಿಸಿ ಕೆಲವು ನಿರ್ಣಯ ಕೈಗೊಳ್ಳಲಾಗಿದೆ.

SCROLL FOR NEXT