ದೇಶ

ಸಂಪರ್ಕಕ್ಕೆ ಸಿಗದ ಶಿವಸೇನೆ ಶಾಸಕರು: ಚಿಂತೆಯಲ್ಲಿ 'ಮಹಾ' ಸರ್ಕಾರ; ನಮ್ಮ ಪಾತ್ರವಿಲ್ಲ ಎಂದ ಬಿಜೆಪಿ

Manjula VN

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬಳಿಕ ಶಿವಸೇನೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಏಕನಾಥ್​ ಶಿಂಧೆ ಅವರು ಕೆಲ ಶಾಸಕರೊಂದಿಗೆ ನಾಪತ್ತೆಯಾಗಿರುವುದು ಮಹಾರಾಷ್ಟ್ರ ಸರ್ಕಾರ ಚಿಂತೆಗೊಳಗಾಗುವಂತೆ ಮಾಡಿದ್ದು, ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಈ ಬೆಳವಣಿಗೆಯಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಮಾತನಾಡಿ, ಶಿವಸೇನೆ ನಾಯಕರು ನಾಪತ್ತೆಯಾಗಿರುವುದರಲ್ಲಿ ನಮ್ಮ ಪಾತ್ರವಿಲ್ಲ ಆದರೆ, ಏಕನಾಥ್ ಶಿಂಧೆಯವರು ನಮ್ಮನ್ನು ಸಂಪರ್ಕಿಸಿ ಸರ್ಕಾರ ರಚಿಸುವ ಆಫರ್ ನೀಡಿದ್ದೇ ಆದರೆ, ಅದಕ್ಕೆ ನಮ್ಮ ಒಪ್ಪಿಗೆ ಇದೆ ಎಂದು ಹೇಳಿದ್ದಾರೆ.

ಶಾಸಕರು ನಾಪತ್ತೆಯಾಗಿರುವುದು ಶಿವಸೇನೆಯ ಆಂತರಿಕ ವಿಚಾರ. ಪಕ್ಷದ ನಾಯಕರೊಂದಿಗೆ ಶಿಂಧೆ ಸೂರತ್'ಗೆ ಹೋಗಿರುವ ಕುರಿತು ನಮಗೆ ಮಾಹಿತಿ ಇಲ್ಲ. ಇದರಲ್ಲಿ ನಮ್ಮ ಪಾತ್ರವಿಲ್ಲ. ಆದರೆ, ಶಿಂಧೆಯವರಿಂದ ಸರ್ಕಾರ ರಚಿರುವ ಆಫರ್ ಬಂದರೆ, ಅದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಹಿಂದೆ ಕೂಡ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಸರ್ಕಾರ ರಚನೆಯಾದರೆ, ಮುಂದೆಯೂ ಉತ್ತಮವಾಗಿ ಕೆಲಸ ಮಾಡುತ್ತೇವೆ. ಅವರೊಂದಿಗೆ ಸರ್ಕಾರ ರಚಿಸಲು ಸಿದ್ಧರಿದ್ದೇವೆ. ರಾವತ್ ರಾಜ್ಯಕ್ಕೆ ಸಾಕಷ್ಟು ಹಾನಿಯುಂಟು ಮಾಡಿದ್ದಾರೆ. ವ್ಯಕ್ತಿಯೊಬ್ಬರ ಪರವಾಗಿ ಈ ರೀತಿ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.

ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ನಾರಾಯಣ್ ರಾಣೆಯವರು ಮಾತನಾಡಿ, ಏಕನಾಥ್ ಶಿಂಧೆಯವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ವೆಲ್ ಡನ್ ಏಕ್ ನಾಥ್ ಜೀ, ಸೂಕ್ತ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀರಿ.  ಇಲ್ಲದಿದ್ದರೆ, ಶೀಘ್ರದಲ್ಲೇ ನೀವೂ ಕೂಡ ಆನಂದ್ ದಿಘೆಯಂತೆ ಕೊನೆಗೊಳ್ಳುತ್ತಿದ್ದಿರಿ ಎಂದು ರಾಣೆಯವರು ಹೇಳಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಸುಧೀರ್ ಮುಂಗಂಟಿವಾರ್ ಅವರು ಮಾತನಾಡಿ, ಶಿವಸೇನೆ ನೇತೃತ್ವದ ಸರ್ಕಾರದ ಕಾರ್ಯವೈಖರಿಯ ಬಗ್ಗೆ ತಮ್ಮ ಪಕ್ಷವು ನಿರಂತರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದೆ ಎಂದು ಹೇಳಿದ್ದಾರೆ.

ಶಿವಸೇನೆಯ ಬಂಡಾಯ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಲು ಪ್ರಯತ್ನಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಹಲವಾರು ಸೇನಾ ನಾಯಕರು ಸರ್ಕಾರದ ಬಗ್ಗೆ ಅತೃಪ್ತರಾಗಿದ್ದಾರೆ. ಇದೇನು ರಹಸ್ಯವಾಗಿ ಉಳಿದಿಲ್ಲ. ಶಿವಸೇನೆ ಬಂಡಾಯ ಶಾಸಕರೊಂದಿಗೆ ಸರ್ಕಾರ ರಚಿಸುವ ಕುರಿತು ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.

ಈ ನಡುವೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಲು ಬಿಜೆಪಿ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್ ಅವರು ನಿರಾಕರಿಸಿದ್ದಾರೆ.

20-25 ಮಂದಿ ಶಾಸಕರೊಂದಿಗೆ ಏಕನಾಥ್ ಶಿಂಧೆಯವರು ಗುಜರಾತ್ ರಾಜ್ಯದ ಸೂರತ್ ನಲ್ಲಿರುವ ಹೋಟೆಲ್ ಲೆ ಮೆರಿಡಿಯನ್ ನಲ್ಲಿ ತಂಗಿದ್ದಾರೆಂದು ವರದಿಗಳು ತಿಳಿಸಿವೆ. ಹೋಟೆಲ್'ಗೆ ಗುಜರಾತ್ ರಾಜ್ಯದ ಪೊಲೀಸರು ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದು, ಎಷ್ಟು ಮಂದಿ ಶಾಸಕರು ಹೋಟೆಲ್ ನಲ್ಲಿ ತಂಗಿದ್ದಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

SCROLL FOR NEXT