ದೇಶ

'ಶಾಸಕರ ಸಂಖ್ಯಾಬಲ ಯಾವ ಕ್ಷಣದಲ್ಲಿಯೂ ಬದಲಾಗಬಹುದು, ಸದನ ಪರೀಕ್ಷೆಯಲ್ಲಿ ಗೆದ್ದೇ ಗೆಲ್ಲುತ್ತೇವೆ': ಸಂಜಯ್ ರಾವತ್

Sumana Upadhyaya

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ತಮ್ಮ ಬಲ ಕ್ಷೀಣಿಸುತ್ತಿದೆ ಎಂಬುದನ್ನು ಶಿವಸೇನೆ ನಾಯಕ ಸಂಜಯ್ ರಾವತ್ ಒಪ್ಪಿಕೊಂಡಿದ್ದಾರೆ. ಶಿವಸೇನೆಯ ಸಚಿವ ಏಕನಾಥ್ ಶಿಂಧೆ ಬಂಡಾಯದ ಹಿನ್ನೆಲೆಯಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಅಲ್ಲೋಲಕಲ್ಲೋಲವಾಗಿದೆ. ಆದರೆ ಸದನದಲ್ಲಿ ತಾವು ಬಹುಮತ ಸಾಬೀತುಪಡಿಸಲಿದ್ದು ಶಾಸಕರ ಸಂಖ್ಯಾಬಲ ಯಾವುದೇ ಕ್ಷಣದಲ್ಲಿಯೂ ಬದಲಾಗಬಹುದು ಎಂದಿದ್ದಾರೆ.

ಬಂಡಾಯ ಶಾಸಕರು ಮುಂಬೈಗೆ ಹಿಂತಿರುಗಿದಾಗ ಪಕ್ಷದ ಮೇಲಿನ ನಿಷ್ಠೆಯ ನಿಜವಾದ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಂಜಯ್ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ. 

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ರಾವತ್ ಬಿಜೆಪಿ ನಾಯಕ ನಾರಾಯಣ ರಾಣೆ ಅವರ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ.

ಬಂಡಾಯ ನಾಯಕ ಏಕನಾಥ್ ಶಿಂಧೆ ಅವರ ಜೊತೆ ಪ್ರಸ್ತುತ ಶಿವಸೇನೆಯ 37 ಬಂಡಾಯ ಶಾಸಕರು ಮತ್ತು ಒಂಬತ್ತು ಸ್ವತಂತ್ರ ಶಾಸಕರು ಗುವಾಹಟಿಯ ಹೊಟೇಲ್ ನಲ್ಲಿ ಬೀಡುಬಿಟ್ಟಿದ್ದಾರೆ.

ಇನ್ನು ಮಹಾ ವಿಕಾಸ್ ಅಘಾಡಿಯ ಭಾಗವಾಗಿರುವ ಕಾಂಗ್ರೆಸ್ ಆದಷ್ಟು ಶೀಘ್ರವೇ ಅಸ್ಸಾಂ ತೊರೆದು ಮುಂಬೈಗೆ ಬನ್ನಿ, ಕುಳಿತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಏಕನಾಥ್ ಶಿಂಧೆಗೆ ಪತ್ರ ಬರೆದಿದ್ದಾರೆ. 

ಸರ್ಕಾರ ಉರುಳಿಸುವುದರಲ್ಲಿ ತಮಗೆ ಆಸಕ್ತಿಯಿಲ್ಲ, ಪ್ರಸ್ತುತ ನಡೆಯುತ್ತಿರುವ ಬಿಕ್ಕಟ್ಟಿನಲ್ಲಿ ಬಿಜೆಪಿಯ ಪಾತ್ರವೇನೂ ಇಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. 

ಏಕನಾಥ್ ಶಿಂಧೆಗೆ 50 ಶಾಸಕರ ಬೆಂಬಲ?: ಇಂದು ಮಧ್ಯಾಹ್ನ ನಂತರ ಗುವಾಹಟಿಗೆ ಹೆಚ್ಚಿನ ಶಾಸಕರು ಆಗಮಿಸುವ ಸಾಧ್ಯತೆಯಿದ್ದು, ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟನ್ನು ಇನ್ನಷ್ಟು ಗಾಢವಾಗಿಸುವ ಸಾಧ್ಯತೆಯಿರುವುದರಿಂದ ಏಕನಾಥ ಶಿಂಧೆಗೆ 50ಕ್ಕೂ ಹೆಚ್ಚು ಶಾಸಕರ ಬೆಂಬಲ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ಶಿವಸೇನೆಯನ್ನು ಸ್ಥಾಪಿಸಿದ ಬಾಳ್ ಠಾಕ್ರೆ ಅವರ ಪರಂಪರೆ ಏಕನಾಥ್ ಶಿಂಧೆಯವರ ಬಂಡಾಯದಿಂದ ಉದ್ಧವ್ ಠಾಕ್ರೆಯವರ ಕೈಯಿಂದ ಜಾರಿದಂತಿದೆ.

SCROLL FOR NEXT