ದೇಶ

ಜವಾಹರ್ ಲಾಲ್ ನೆಹರೂ ಜನ್ಮದಿನ: ನೆಹರೂ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಸೋನಿಯಾ ಗಾಂಧಿ, ಖರ್ಗೆ

Manjula VN

ನವದೆಹಲಿ: ದೇಶದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಅವರ ಜನ್ಮದಿನವನ್ನು ಸೋಮವಾರ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ಶಾಂತಿವನಕ್ಕೆ ತೆರಳಿ ನೆಹರೂ ಸಮಾಧಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪುಷ್ಪ ನಮನ ಸಲ್ಲಿಸಿದರು.

ನೆಹರೂ ಅವರಿಗೆ ಗೌರವ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆಯವರು, ಭಾರತದ ಮೊದಲ ಪ್ರಧಾನಿಯವರ ಕೊಡುಗೆ ಇಲ್ಲದೆ 21 ನೇ ಶತಮಾನದ ಭಾರತವನ್ನು "ಕಲ್ಪನೆ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಇದೇ ವೇಳೆ ನೆಹರೂ ಅವರನ್ನು "ಪ್ರಜಾಪ್ರಭುತ್ವದ ಚಾಂಪಿಯನ್" ಎಂದು ಕರೆದ ಖರ್ಗೆ ಅವರು, "ಸವಾಲುಗಳ ನಡುವೆಯೂ" ಅವರ ಆಲೋಚನೆಗಳು ಭಾರತದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಿವೆ ಎಂದಿದ್ದಾರೆ.

ನೆಹರು -- ಆಧುನಿಕ ಭಾರತದ ನಿರ್ಮಾತೃ. 21 ನೇ ಭಾರತವನ್ನು ಅವರ ಪ್ರಚಂಡ ಕೊಡುಗೆಯಿಲ್ಲದೆ ಕಲ್ಪಿಸಿಕೊಳ್ಳಲಾಗುವುದಿಲ್ಲ. ಅವರು ಪ್ರಜಾಪ್ರಭುತ್ವದ ಚಾಂಪಿಯನ್, ಅವರ ಪ್ರಗತಿಪರ ಚಿಂತನೆಗಳು ಸವಾಲುಗಳ ನಡುವೆಯೂ ಭಾರತದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಿವೆ. ನಿಜವಾದ ದೇಶಭಕ್ತನಿಗೆ ನನ್ನ ನಮ್ರ ನಮನಗಳು ಎಂದು ತಿಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿರುವ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ತಮ್ಮ ಮುತ್ತಾತನನ್ನು ಸ್ಮರಿಸಿದ್ದು, ಅಪರೂಪದ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಭಾರತ ಮಾತೆ ಯಾರು?, ಭಾರತದ ಜನರು ಈ ವಿಶಾಲವಾದ ಭೂಮಿಯಲ್ಲಿ ಹೆಚ್ಚು-ಹೆಚ್ಚು ಹರಡಿದ್ದಾರೆ. ಇಲ್ಲಿ ಕೋಟಿ ಕೋಟಿ ಜನರೇ ಭಾರತದ ತಾಯಿ. ಪಂಡಿತ್ ನೆಹರೂ ಅವರ ಪ್ರಜಾಸತ್ತಾತ್ಮಕ, ಪ್ರಗತಿಪರ ಮತ್ತು ಜಾತ್ಯತೀತ ಮೌಲ್ಯಗಳನ್ನು ನನ್ನ ಹೃದಯದಲ್ಲಿ ಹೊತ್ತುಕೊಂಡು, 'ಹಿಂದು ರತ್ನ'ವಾದ ಭಾರತಮಾತೆಯನ್ನು ರಕ್ಷಿಸಲು ನಾನು ಸಂಕಲ್ಪ ಹೊತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ನೆಹರೂ ಅವರಿಗೆ ಗೌರವ ಸೂಚಿಸಿದ್ದಾರೆ.

ನಮ್ಮ ಮಾಜಿ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಜಿ ಅವರಿಗೆ ನಮನಗಳು. ನಮ್ಮ ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಇಂದು ನಾವು ಸ್ಮರಿಸತ್ತಿದ್ದೇವೆಂದು ಹೇಳಿದ್ದಾರೆ.

SCROLL FOR NEXT