ದೇಶ

ಗುಜರಾತ್'ನಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಬಿಜೆಪಿ ಅಪಹರಿಸಿದೆ, ನಿನ್ನೆಯಿಂದ ಅವರು ನಾಪತ್ತೆಯಾಗಿದ್ದಾರೆ: ಆಪ್ ಆರೋಪ

Manjula VN

ನವದೆಹಲಿ: ಗುಜರಾತ್'ನಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಬಿಜೆಪಿ ಅಪಹರಿಸಿದೆ, ನಿನ್ನೆಯಿಂದ ಅವರು ನಾಪತ್ತೆಯಾಗಿದ್ದಾರೆಂದು ಆಮ್ ಆದ್ಮಿ ಪಕ್ಷ ಬುಧವಾರ ಆರೋಪಿಸಿದೆ.

ಈ ಕುರಿತು ಮಾತನಾಡಿರುವ ದೆಹಲಿ ಉಪಮಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಬಿಜೆಪಿ ಅಪಹರಿಸಿದೆ ಎಂದು ಆರೋಪಿಸಿದ್ದಾರೆ.

ಕಾಂಚನ್ ಜರಿವಾಲಾ ಅವರು ಸೂರತ್‌ನಿಂದ (ಪೂರ್ವ) ಎಎಪಿ ಅಭ್ಯರ್ಥಿಯಾಗಿದ್ದಾರೆ. ಗುಜರಾತ್ ರಾಜ್ಯ ಚುನಾವಣೆಯಲ್ಲಿ ಸೋಲುವ ಭೀತಿ ಬಿಜೆಪಿಗೆ ಎದುರಾಗಿದೆ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಅಪಹರಿಸಿದೆ ಎಂದು ಹೇಳಿದ್ದಾರೆ.

ನಿನ್ನೆಯಿಂದ ಕಾಂಚನ್ ಹಾಗೂ ಅವರ ಕುಟುಂಬದವರು ನಾಪತ್ತೆಯಾಗಿದ್ದಾರೆ. ನಾಮಪತ್ರ ಪರಿಶೀಲನೆಗೆ ತೆರಳಿದ್ದರು. ನಾಮಪತ್ರ ಪರಿಶೀಲನೆ ಮುಗಿಸಿ ಕಚೇರಿಯಿಂದ ಹೊರ ಬಂದ ಕ್ಷಣದಲ್ಲೇ ಬಿಜೆಪಿಯ ಗೂಂಡಾಗಳು ಅವರನ್ನು ಕರೆದೊಯ್ದಿದ್ದಾರೆ. ಈಗ ಅವರು ಎಲ್ಲಿದ್ದಾರೆಂಬುದು ನಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಇದು ಅಪಾಯಕಾರಿ, ಇದು ಕೇವಲ ಅಭ್ಯರ್ಥಿಯ ಅಪಹರಣವಲ್ಲ, ಪ್ರಜಾಪ್ರಭುತ್ವದ ಅಪಹರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆ ಕುರಿತು ಅರವಿಂದ ಕೇಜ್ರಿವಾಲ್ ಕೂಡ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

"ನಮ್ಮ ಪಕ್ಷದ ಅಭ್ಯರ್ಥಿ ಕಾಂಚನ್ ಜರಿವಾಲಾ ಮತ್ತು ಅವರ ಕುಟುಂಬ ನಿನ್ನೆಯಿಂದ ನಾಪತ್ತೆಯಾಗಿದೆ, ಮೊದಲು, ಬಿಜೆಪಿ ಅವರ ನಾಮಪತ್ರವನ್ನು ತಿರಸ್ಕರಿಸಲು ಪ್ರಯತ್ನಿಸಿತು. ನಂತರ ಅವರ ನಾಮಪತ್ರವನ್ನು ಸ್ವೀಕರಿಸಲಾಯಿತು. ಬಳಿಕ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಲಾಯಿತು. ಇದೀಗ ಅವರನ್ನು ಅಪಹರಣ ಮಾಡಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

SCROLL FOR NEXT