ದೇಶ

ಪೋಷಕರನ್ನು ನಿಂದಿಸಿದರೂ ಪರವಾಗಿಲ್ಲ, ಮೋದಿ, ಅಮಿತ್ ಶಾರನ್ನು ನಿಂದಿಸಬಾರದು: ಚಂದ್ರಕಾಂತ್ ಪಾಟೀಲ್ ವಿವಾದಾಸ್ಪದ ಹೇಳಿಕೆ

Sumana Upadhyaya

ಮುಂಬೈ: ಮಹಾರಾಷ್ಟ್ರ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಮತ್ತು ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ್ ಪಾಟೀಲ್ ಅವರು "ಪೋಷಕರನ್ನು ನಿಂದಿಸುವುದು ಸ್ವೀಕಾರಾರ್ಹ ಎಂಬ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಪೋಷಕರನ್ನು ಬೇಕಾದರೆ ನಿಂದಿಸಬಹುದು, ಕೊಲ್ಹಾಪುರ, ಮಹಾರಾಷ್ಟ್ರಗಳಲ್ಲಿ ಅದು ಸಾಮಾನ್ಯ, ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧದ ಮಾತನ್ನು ಸಹಿಸುವುದಿಲ್ಲ ಎಂದು ಪುಣೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಹೇಳಿದ್ದಾರೆ. ಮೊದಲೇ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಚಂದ್ರಕಾಂತ್ ಪಾಟೀಲ್ ಅವರ ಈ ಹೇಳಿಕೆ ಭಾರತೀಯ ಸಂಸ್ಕೃತಿ, ತಂದೆ-ತಾಯಿಗಳಿಗೆ ಗೌರವ ಕೊಡಬೇಕೆನ್ನುವ ಆಚಾರ-ವಿಚಾರಗಳಿಗೆ ತಕ್ಕುದಾದುದಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಪೋಷಕರನ್ನು ನಿಂದಿಸುವುದು ತಪ್ಪಲ್ಲ,ಕೊಲ್ಲಾಪುರದಲ್ಲಿ ಇದು ಸಾಮಾನ್ಯವಾಗಿದೆ - ಆದರೆ ಯಾರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಭಾಯ್ ಶಾ ವಿರುದ್ಧ ನಿಂದನೆ ಪದ ಬಳಸಿದರೆ ಅದನ್ನು ಸಹಿಸುವುದಿಲ್ಲ ಎಂದು ಪಾಟೀಲ್ ಹೇಳಿದರು. ಪಾಟೀಲ್ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಚಂದ್ರಕಾಂತ್ ಪಾಟೀಲ್ ಅವರು ತಮ್ಮ ನಾಯಕರನ್ನು ಹೊಗಳಬಹುದು, ಆದರೆ ಅವರು ಕೊಲ್ಲಾಪುರ ಮತ್ತು ಮಹಾರಾಷ್ಟ್ರದ ಸಂಸ್ಕೃತಿಯನ್ನು ಹಾಳು ಮಾಡಬಾರದು. ನಾಯಕರು ತಮ್ಮ ನಾಯಕರನ್ನು ಹೊಗಳುವಾಗ ಜಾಗರೂಕರಾಗಿರಬೇಕು. ಪೋಷಕರನ್ನು ನಿಂದಿಸುವುದು ಸ್ವೀಕಾರಾರ್ಹವಲ್ಲ ಎಂದು ಎನ್‌ಸಿಪಿ ಶಾಸಕ ರೋಹಿತ್ ಪವಾರ್ ಹೇಳಿದ್ದಾರೆ.

ಪೋಷಕರನ್ನು ನಿಂದಿಸುವುದು ಬಿಜೆಪಿಯ ಹಿಂದುತ್ವ ಎಂದು ಶಿವಸೇನೆ ವಕ್ತಾರ ಮನಿಷಾ ಕಯಾಂಡೆ ವ್ಯಂಗ್ಯವಾಡಿದ್ದಾರೆ. ಕೆಲವು ದಿನಗಳ ಹಿಂದೆ ಚಂದ್ರಕಾಂತ್ ಪಾಟೀಲ್ ಅವರು ಎನ್‌ಸಿಪಿ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ವಿರುದ್ಧ ಲೈಂಗಿಕ ಟೀಕೆಗಳನ್ನು ಮಾಡಿದ್ದರು. ಆಕೆ ಮನೆಗೆ ಹೋಗಿ ಭಕಾರಿ ಥಾಪಾ ಅಡುಗೆ ಮಾಡಬೇಕು ಎಂದು ಹೇಳಿದ್ದರು. ಒಬಿಸಿಗಳಿಗೆ ಕೋಟಾದ ಸಂದರ್ಭದಲ್ಲಿ ಸುಳೆ ವಿರುದ್ಧ ಟೀಕೆ ಮಾಡಿದ್ದರು. ಆದರೆ ಕ್ಷಮೆಯಾಚಿಸಿರಲಿಲ್ಲ.  

ಬಿಜೆಪಿ ಪಕ್ಷ ಸ್ತ್ರೀದ್ವೇಷ ಎಂಬುದನ್ನು ಚಂದ್ರಕಾಂತ್ ಪಾಟೀಲ್ ಸಾಬೀತುಪಡಿಸಿದ್ದಾರೆ ಎಂದು ಸಂಸದ ಸುಪ್ರಿಯಾ ಸುಳೆ ಪತಿ ಸದಾನಂದ ಸುಳೆ ವಾಗ್ದಾಳಿ ನಡೆಸಿದ್ದರು. 

SCROLL FOR NEXT