ನವದೆಹಲಿ: ಪಂಚರಾಜ್ಯಗಳ ಚುನಾವಣೆ ಬಳಿಕ INDIA ಮೈತ್ರಿಕೂಟಕ್ಕೆ ಸ್ಥಾನ ಹಂಚಿಕೆ ಪ್ರಮುಖ ಸವಾಲಾಗಿ ಪರಿಣಮಿಸಿದೆ. ಮೈತ್ರಿಕೂಟದ ಮುಂದಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಲು ಡಿ.19 ರಂದು ಮೈತ್ರಿಕೂಟದ ಸಭೆ ನಡೆಯಲಿದೆ.
ನವದೆಹಲಿಯಲ್ಲಿ ಮೈತ್ರಿಕೂಟದ ನಾಲ್ಕನೇ ಸಭೆ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ನಾನಲ್ಲ, ನಾವು ಎಂಬ ಘೋಷ ವಾಕ್ಯದಡಿಯಲ್ಲಿ ಪ್ರಧಾನಿ ಮೋದಿ ಅವರನ್ನು ಎದುರಿಸಲು ವಿಪಕ್ಷಗಳು ಮುನ್ನಡೆಯಲಿವೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪರ್ಯಾಯ ಧನಾತ್ಮಕ ಕಾರ್ಯಸೂಚಿಯೊಂದಿಗೆ ಹೊರಬರುವುದು ಈಗ ವಿರೋಧ ಪಕ್ಷಗಳ ಮುಂದಿರುವ ಸವಾಲಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಸಭೆಯಲ್ಲಿ ಪಕ್ಷಗಳು ಸೀಟು ಹಂಚಿಕೆ, ಜಂಟಿ ಚುನಾವಣಾ ರ್ಯಾಲಿಗಳನ್ನು ನಡೆಸುವುದು ಮತ್ತು ಮೈತ್ರಿಕೂಟದ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸುವುದರ ಬಗ್ಗೆ ಚರ್ಚೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.