ದೇಶ

ಶಿವಸೇನೆ ಚಿಹ್ನೆ ವಿವಾದದಲ್ಲಿ ಭಾಗಿಯಾಗುವುದಿಲ್ಲ: ಶರದ್ ಪವಾರ್

Lingaraj Badiger

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಶಿವಸೇನೆಯ ಮೂಲ ಚಿಹ್ನೆಯಾದ 'ಬಿಲ್ಲು ಬಾಣ'ವನ್ನು ನೀಡಿದ ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ನನ್ನ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ ಮತ್ತು ಚಿಹ್ನೆ ವಿವಾದಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್ ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಭಾನುವಾರ ಹೇಳಿದ್ದಾರೆ.

ಚುನಾವಣಾ ಆಯೋಗ ಕಳೆದ ಶುಕ್ರವಾರ ಶಿವಸೇನೆಯ ಮೂಲ ಚಿಹ್ನೆಯಾದ 'ಬಿಲ್ಲು ಬಾಣ'ವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ನೀಡುವ ಮೂಲಕ ಉದ್ಧವ್ ಠಾಕ್ರೆ ಬಣಕ್ಕೆ ಶಾಕ್ ನೀಡಿದೆ.

ಚುನಾವಣಾ ಆಯೋಗದ ಆದೇಶ 'ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ' ಎಂದು ಉದ್ಧವ್ ಠಾಕ್ರೆ ಹೇಳಿದ್ದು, ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.

ಇನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ಚುನಾವಣಾ ಆಯೋಗದ ನಿರ್ಧಾರ ಸತ್ಯ ಮತ್ತು ಜನರ ಗೆಲುವು ಎಂದು ಬಣ್ಣಿಸಿದ್ದರು.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ 'ಬಿಲ್ಲು ಮತ್ತು ಬಾಣ' ಚಿಹ್ನೆ ಸಿಗದಿರುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ಅವರು ಹೊಸ ಚುನಾವಣಾ ಚಿಹ್ನೆಯನ್ನು ಸ್ವೀಕರಿಸುತ್ತಾರೆ ಎಂದು ಪವಾರ್ ಹೇಳಿದ್ದಾರೆ.

ಇಂದು ಪುಣೆಯ ಬಾರಾಮತಿ ಪಟ್ಟಣದಲ್ಲಿ ಶಿವಸೇನೆ ಚಿಹ್ನೆ ವಿವಾದದ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪವಾರ್ ಅವರು, ಏಕನಾಥ್ ಶಿಂಧೆ ಅವರಿಗೆ ನೀಡಿರುವ ಹೆಸರು ಮತ್ತು ಚಿಹ್ನೆಯ ಕುರಿತ ವಿವಾದದಲ್ಲಿ ಭಾಗಿಯಾಗಲು ನಾನು ಬಯಸುವುದಿಲ್ಲ. ನಾನು ಈಗಾಗಲೇ ನನ್ನ ನಿಲುವು ಸ್ಪಷ್ಟಪಡಿಸಿದ್ದೇನೆ ಎಂದರು.

SCROLL FOR NEXT