ದೇಶ

ಬಿಲ್ಕಿಸ್ ಬಾನು ಪ್ರಕರಣ: ಆರೋಪಿಗಳ ಬಿಡುಗಡೆ ಪ್ರಶ್ನಿಸಿದ್ದ ಇತರ ಅರ್ಜಿಗಳ ವಿಚಾರಣೆಯಿಂದಲೂ ಹಿಂದೆ ಸರಿದ 'ಸುಪ್ರೀಂ' ನ್ಯಾಯಮೂರ್ತಿ

Ramyashree GN

ನವದೆಹಲಿ: 2002ರ ಗುಜರಾತ್ ಗಲಭೆ ವೇಳೆ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಇತರರ ಅರ್ಜಿಗಳ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರು ಬುಧವಾರ ಹಿಂದೆ ಸರಿದಿದ್ದಾರೆ.

ನ್ಯಾಯಮೂರ್ತಿ ಅಜಯ್ ರಸ್ತೋಗಿ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠವು, ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್, ಲಖನೌ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ರೂಪ್ ರೇಖಾ ವರ್ಮಾ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿತು.

'ನನ್ನ ಸೋದರಿ ನ್ಯಾಯಾಧೀಶರು ಈಗಾಗಲೇ ಬಿಲ್ಕಿಸ್ ಬಾನು ಅತ್ಯಾಚಾರ ಸಂತ್ರಸ್ತೆಯ ಮನವಿ ವಿಚಾರಣೆಯಿಂದ ಹಿಂದೆ ಸರಿದಿರುವುದರಿಂದ, ಅವರು ಈ ವಿಷಯಕ್ಕೆ ಸಂಬಂಧಿಸಿ ಇತರ ವಿಚಾರಣೆಯಿಂದಲೂ ಹಿಂದೆ ಸರಿಯಲು ಬಯಸುತ್ತಾರೆ' ಎಂದು ನ್ಯಾಯಮೂರ್ತಿ ರಸ್ತೋಗಿ ಹೇಳಿದರು.

'ಈಗಾಗಲೇ ಸಂತ್ರಸ್ತೆ ಅಪರಾಧಿಗಳ ಅವಧಿಪೂರ್ವ ಬಿಡುಗಡೆಯನ್ನು ಪ್ರಶ್ನಿಸಿ ಈ ನ್ಯಾಯಾಲಯವನ್ನು ಸಂಪರ್ಕಿಸಿದ್ದು, ಆಕೆಯ ಮನವಿಯನ್ನು ಪ್ರಮುಖ ವಿಷಯವಾಗಿ ತೆಗೆದುಕೊಳ್ಳಲಾಗುವುದು' ಎಂದು ನ್ಯಾಯಮೂರ್ತಿ ರಸ್ತೋಗಿ ಹೇಳಿದರು.

'ಪೀಠವು ವಿಭಿನ್ನ ನ್ಯಾಯಾಧೀಶರ ಸಂಯೋಜನೆಯೊಂದಿಗೆ ವಿಚಾರಣೆಗೆ ಕುಳಿತುಕೊಳ್ಳುವಾಗ ಉಳಿದ ಅರ್ಜಿಗಳನ್ನು ಕೂಡ ಸಂತ್ರಸ್ತೆಯ ಮನವಿಯೊಂದಿಗೆ ಕೈಗೆತ್ತಿಕೊಳ್ಳಲಾಗುತ್ತದೆ. ನಾವು ಮುಂದಿನ ದಿನಾಂಕದಂದು ಎಲ್ಲಾ ವಿಷಯಗಳ ವಿಚಾರಣೆ ಕೈಗೊಳ್ಳುತ್ತೇವೆ ಮತ್ತು ಎಲ್ಲಾ ಅರ್ಜಿಗಳನ್ನು ಟ್ಯಾಗ್ ಮಾಡುತ್ತೇವೆ. ಅಷ್ಟರೊಳಗೆ ಎಲ್ಲಾ ಮನವಿ ಸಲ್ಲಿಕೆಗಳು ಪೂರ್ಣಗೊಳ್ಳಬೇಕು' ಎಂದು ನ್ಯಾಯಮೂರ್ತಿ ರಸ್ತೋಗಿ ಹೇಳಿದರು.

ಬಿಲ್ಕಿಸ್‌ ಬಾನು ಮೇಲೆ ಅತ್ಯಾಚಾರ ಮತ್ತು ಅವರ ಕುಟುಂಬದ 7 ಮಂದಿಯ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಕೈದಿಗಳಿಗೆ ಗುಜರಾತ್‌ ಸರ್ಕಾರವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನದಂದು ಶಿಕ್ಷೆ ಅವಧಿ ಕಡಿತಗೊಳಿಸಿ, ಬಿಡುಗಡೆ ಮಾಡಿತ್ತು.

2002ರ ಗೋಧ್ರಾ ರೈಲು ದಹನದ ನಂತರ ಭುಗಿಲೆದ್ದ ಹಿಂಸಾಚಾರದಿಂದ ತಪ್ಪಿಸಿಕೊಳ್ಳುವಾಗ 21 ವರ್ಷದ ಬಿಲ್ಕಿಸ್ ಬಾನು ಅವರ ಮೇಲೆ ಮಾರ್ಚ್ 3ರಂದು 11 ಮಂದಿ ಅತ್ಯಾಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು 5 ತಿಂಗಳ ಗರ್ಭಿಣಿ ಆಗಿದ್ದರು. ಗಲಭೆಯಲ್ಲಿ ಬಿಲ್ಕಿಸ್ ಬಾನು ಅವರ 3 ವರ್ಷದ ಮಗು ಮೃತಪಟ್ಟಿತ್ತು.

ಅಪರಾಧಿಗಳ ಅವಧಿಪೂರ್ವ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

SCROLL FOR NEXT