ದೇಶ

ಭಾರತವನ್ನು ಶಬ್ದಗಳಿಂದ ವರ್ಣಿಸಲು ಸಾಧ್ಯವಿಲ್ಲ, ಹೃದಯದಿಂದ ಅನುಭವಿಸಬೇಕು: ಪ್ರಧಾನಿ ನರೇಂದ್ರ ಮೋದಿ

Sumana Upadhyaya

ನವದೆಹಲಿ: ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಭಾರತ ದೇಶವನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ಹೃದಯಾಂತರಾಳದಿಂದ ಅನುಭವಿಸಬಹುದಷ್ಟೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ವಿಶ್ವದ ಅತಿ ಉದ್ದದ ನದಿ ಕ್ರೂಸ್ ಎಂ ವಿ ಗಂಗಾ ವಿಲಾಸವನ್ನು ಇಂದು ವಾರಣಾಸಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು ವಾರಣಾಸಿಯಲ್ಲಿ ಟೆಂಟ್ ಸಿಟಿಯನ್ನು ಉದ್ಘಾಟಿಸಿದ್ದಲ್ಲದೆ ಇನ್ನೂ 1 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಲವು ಜಲಾಂತರ್ಗಾಮಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಇದು ಭಾರತದ ಮೂಲಭೂತ ಸೌಕರ್ಯಗಳನ್ನು ರೂಪಾಂತರ ಮಾಡುವ ದಶಕವಿದು. ಭಾರತವು ಊಹಿಸಬಹುದಾದ ಎಲ್ಲವನ್ನೂ ಹೊಂದಿದೆ. ನಿಮ್ಮ ಊಹೆಗೆ ಮೀರಿ ಭಾರತದಲ್ಲಿದೆ. ಭಾರತವನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಭಾರತಮಾತೆ ಪ್ರತಿಯೊಬ್ಬರಿಗೂ ಜಾತಿ, ಧರ್ಮ, ಮತ, ದೇಶ, ಬಡವ-ಬಲ್ಲಿದ ಎಂಬ ಬೇಧವಿಲ್ಲದೆ ತನ್ನ ಹೃದಯವನ್ನು ತೆರೆದಿಟ್ಟಿರುವುದರಿಂದ ಭಾರತದ ಬಗ್ಗೆ ಹೃದಯದಿಂದ ಅನುಭವಿಸಲು ಮಾತ್ರ ಸಾಧ್ಯ ಎಂದರು.

ವಿಶ್ವದ ಅತಿ ಉದ್ದದ ರಿವರ್ ಕ್ರೂಸ್ ಸೇವೆಯನ್ನು ಗಂಗಾ ನದಿಯಲ್ಲಿ ಆರಂಭಿಸಿರುವುದು ಭಾರತದ ಮಟ್ಟಿಗೆ ದೊಡ್ಡ ಸಾಧನೆ. ಇದು ಭಾರತದ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯವನ್ನು ಬರೆಯಲಿದೆ. ಕ್ರೂಸ್ ಹಾದುಹೋದಾಗ ಅಲ್ಲಿ ಹೊಸ ಅಭಿವೃದ್ಧಿ ಹುಟ್ಟಿಕೊಳ್ಳುತ್ತದೆ. ಇಂದು ಇನ್ನೂ ಹಲವು ಒಳನಾಡಿನ ಜಲಮಾರ್ಗ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದರಿಂದ ಭಾರತದ ಪೂರ್ವಭಾಗದಲ್ಲಿ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ ಎಂದು ಪ್ರಧಾನ ಮಂತ್ರಿ ಹೇಳಿದರು.

SCROLL FOR NEXT